ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಅವನು ಸ್ವಯಂ ಅವನ ಮೇಲೆ ಅನ್ಯಾಯವನ್ನು ನಿಷೇಧಿಸಿದ್ದಾನೆ ಮತ್ತು ಅದನ್ನು ಅವನ ಸೃಷ್ಟಿಗಳಿಗೂ ನಿಷೇಧಿಸಿದ್ದಾನೆ. ಆದ್ದರಿಂದ ಅವರು (ಸೃಷ್ಟಿಗಳು) ಪರಸ್ಪರ ಅನ್ಯಾಯ ಮಾಡಬಾರದು. ಅಲ್ಲಾಹನ ಮಾರ್ಗದರ್ಶನ ಮತ್ತು ಅನುಗ್ರಹವನ್ನು ಪಡೆಯದ ಸೃಷ್ಟಿಗಳೆಲ್ಲರೂ ಸತ್ಯ ಮಾರ್ಗದಿಂದ ತಪ್ಪಿ ಹೋಗಿದ್ದಾರೆ. ಯಾರು ಅಲ್ಲಾಹನಲ್ಲಿ ಸನ್ಮಾರ್ಗವನ್ನು ಬೇಡುತ್ತಾರೋ ಅವರಿಗೆ ಅವನು ಸನ್ಮಾರ್ಗವನ್ನು ನೀಡಿ ಅನುಗ್ರಹಿಸುತ್ತಾನೆ. ಸೃಷ್ಟಿಗಳೆಲ್ಲರೂ ಅಲ್ಲಾಹನ ಮೇಲೆ ಅವಲಂಬಿತರಾಗಿದ್ದಾರೆ. ಅವರು ತಮ್ಮ ಎಲ್ಲಾ ಅಗತ್ಯಗಳಿಗೂ ಅವನನ್ನೇ ಆಶ್ರಯಿಸಬೇಕಾಗಿದೆ. ಯಾರು ಅಲ್ಲಾಹನಲ್ಲಿ ಬೇಡುತ್ತಾರೋ ಅವರ ಬೇಡಿಕೆಯನ್ನು ಅವನು ಈಡೇರಿಸುತ್ತಾನೆ ಮತ್ತು ಅವರ ಅಗತ್ಯಗಳನ್ನು ಪೂರೈಸುತ್ತಾನೆ. ಸೃಷ್ಟಿಗಳು ಹಗಲು ರಾತ್ರಿ ಪಾಪ ಮಾಡುತ್ತಾರೆ. ದಾಸನು ಅಲ್ಲಾಹನಲ್ಲಿ ಕ್ಷಮೆಯಾಚಿಸುವಾಗ ಅವನು ದಾಸನ ಪಾಪಗಳನ್ನು ಕ್ಷಮಿಸುತ್ತಾನೆ. ಅಲ್ಲಾಹನಿಗೆ ಯಾವುದೇ ತೊಂದರೆ ಮಾಡಲು ಅಥವಾ ಉಪಕಾರ ಮಾಡಲು ಸೃಷ್ಟಿಗಳಿಗೆ ಸಾಧ್ಯವಿಲ್ಲ. ಸೃಷ್ಟಿಗಳೆಲ್ಲರೂ ಅತಿಹೆಚ್ಚು ದೇವಭಯವುಳ್ಳ ವ್ಯಕ್ತಿಯ ಹೃದಯವನ್ನು ಹೊಂದಿದರೆ, ಅವರಲ್ಲಿರುವ ದೇವಭಯದಿಂದ ಅಲ್ಲಾಹನ ಆಧಿಪತ್ಯದಲ್ಲಿ ಏನೂ ಹೆಚ್ಚಾಗುವುದಿಲ್ಲ. ಸೃಷ್ಟಿಗಳೆಲ್ಲರೂ ಅತ್ಯಂತ ದುಷ್ಟ ವ್ಯಕ್ತಿಯ ಹೃದಯವನ್ನು ಹೊಂದಿದರೆ, ಅವರ ದುಷ್ಟತನದಿಂದ ಅಲ್ಲಾಹನ ಆಧಿಪತ್ಯದಲ್ಲಿ ಏನೂ ಕಡಿಮೆಯಾಗುವುದಿಲ್ಲ. ಏಕೆಂದರೆ ಅವರು ದುರ್ಬಲರು ಮತ್ತು ಅಲ್ಲಾಹನನ್ನು ಅವಲಂಬಿಸಿದವರು. ಎಲ್ಲಾ ಸ್ಥಿತಿ, ಕಾಲ ಮತ್ತು ಸ್ಥಳದಲ್ಲೂ ಅಲ್ಲಾಹನ ಅಗತ್ಯವಿರುವವರು. ಆದರೆ ಸರ್ವಶಕ್ತನಾದ ಅಲ್ಲಾಹು ಸೃಷ್ಟಿಗಳಲ್ಲಿ ಯಾರನ್ನೂ ಅವಲಂಬಿಸಿಲ್ಲ. ಮನುಷ್ಯರು ಮತ್ತು ಜಿನ್ನ್‌ಗಳಲ್ಲಿರುವ ಮೊದಲಿನವರು ಮತ್ತು ನಂತರದವರು ಸೇರಿದಂತೆ ಎಲ್ಲರೂ ಒಂದು ಸ್ಥಳದಲ್ಲಿ ನಿಂತು ಅಲ್ಲಾಹನಲ್ಲಿ ಬೇಡಿಕೆಯಿಡ ತೊಡಗಿದರೆ, ಮತ್ತು ಅಲ್ಲಾಹು ಅವರೆಲ್ಲರ ಬೇಡಿಕೆಗಳನ್ನು ಈಡೇರಿಸುತ್ತಾ ಬಂದರೆ, ಸಮುದ್ರಕ್ಕೆ ಸೂಜಿಯನ್ನು ಚುಚ್ಚಿ ಹೊರತೆಗೆದರೆ ಸಮುದ್ರದಲ್ಲಿ ಹೇಗೆ ಏನೂ ಕಡಿಮೆಯಾಗುವುದಿಲ್ಲವೋ ಹಾಗೆಯೇ ಅಲ್ಲಾಹನ ಖಜಾನೆಯಿಂದ ಏನೂ ಕಡಿಮೆಯಾಗುವುದಿಲ್ಲ. ಅಲ್ಲಾಹನ ಶ್ರೀಮಂತಿಕೆಯ ಸಂಪೂರ್ಣತೆಯೇ ಇದಕ್ಕೆ ಕಾರಣ. ಸರ್ವಶಕ್ತನಾದ ಅಲ್ಲಾಹು ದಾಸರ ಕರ್ಮಗಳನ್ನು ದಾಖಲಿಸುತ್ತಾನೆ ಮತ್ತು ಎಣಿಸಿಡುತ್ತಾನೆ. ನಂತರ ಪುನರುತ್ಥಾನ ದಿನದಂದು ಅವುಗಳಿಗೆ ಪ್ರತಿಫಲ ನೀಡುತ್ತಾನೆ. ಯಾರು ತನ್ನ ಕರ್ಮಗಳಿಗೆ ಉತ್ತಮ ಪ್ರತಿಫಲವನ್ನು ಪಡೆಯುತ್ತಾನೋ ಅವನು ಆ ಕರ್ಮಗಳನ್ನು ಮಾಡುವ ಸೌಭಾಗ್ಯ ನೀಡಿದ್ದಕ್ಕಾಗಿ ಅಲ್ಲಾಹನನ್ನು ಸ್ತುತಿಸಲಿ. ಯಾರು ತನ್ನ ಕರ್ಮಗಳಿಗೆ ಉತ್ತಮವಲ್ಲದ ಪ್ರತಿಫಲವನ್ನು ಪಡೆಯುತ್ತಾನೋ ಅವನು, ತನ್ನನ್ನು ನಷ್ಟಕ್ಕೊಳಪಡಿಸಿದ ದುಷ್ಕರ್ಮಗಳಿಗೆ ಪ್ರೇರೇಪಿಸುವ ತನ್ನ ಮನಸ್ಸನ್ನೇ ವಿನಾ ಇನ್ನಾರನ್ನೂ ದೂಷಿಸದಿರಲಿ.