ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಅಗತ್ಯದ ಪ್ರವಚನ (ಖುತ್ಬತುಲ್ ಹಾಜ) ಕಲಿಸಿಕೊಟ್ಟರೆಂದು ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುತ್ತಿದ್ದಾರೆ. ಇದು ಪ್ರವಚನಗಳ ಆರಂಭದಲ್ಲಿ ಮತ್ತು ವಿವಾಹದ ಪ್ರವಚನ, ಶುಕ್ರವಾರದ ಪ್ರವಚನ ಮುಂತಾದ ಅಗತ್ಯದ ಪ್ರವಚನಗಳಿಗೆ ಮುಂಚೆ ಪಠಿಸಲಾಗುವ ವಾಕ್ಯಗಳಾಗಿವೆ. ಎಲ್ಲಾ ರೀತಿಯ ಸ್ತುತಿ-ಪ್ರಶಂಸೆಗಳಿಗೆ ಅಲ್ಲಾಹು ಮಾತ್ರ ಅರ್ಹನು, ಅವನಿಂದ ಮಾತ್ರ ಸಹಾಯ ಯಾಚಿಸುವುದು, ಪಾಪಗಳನ್ನು ಕ್ಷಮಿಸಲು ಮತ್ತು ನಿರ್ಲಕ್ಷಿಸಲು ಬೇಡುವುದು, ದೇಹದ ಕೆಡುಕುಗಳು ಮುಂತಾದ ಎಲ್ಲಾ ರೀತಿಯ ಕೆಡುಕುಗಳಿಂದ ಅವನಲ್ಲಿ ರಕ್ಷಣೆ ಬೇಡುವುದು ಮುಂತಾದ ಮಹಾನ್ ಅರ್ಥಗಳನ್ನು ಈ ಪ್ರವಚನವು ಒಳಗೊಂಡಿದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದೇನೆಂದರೆ, ಸನ್ಮಾರ್ಗವು ಅಲ್ಲಾಹನ ಕೈಯಲ್ಲಿದೆ, ಅಲ್ಲಾಹನ ಮಾರ್ಗದರ್ಶನದಲ್ಲಿರುವವನು ಪಥಭ್ರಷ್ಟನಾಗಲಾರ. ಅಲ್ಲಾಹು ಪಥಭ್ರಷ್ಟಗೊಳಿಸಿದವನು ಮಾರ್ಗದರ್ಶನವನ್ನು ಪಡೆಯಲಾರ. ನಂತರ ಅವರು ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂಬ ಏಕದೇವತ್ವದ ಸಾಕ್ಷ್ಯ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂಬ ಪ್ರವಾದಿತ್ವದ ಸಾಕ್ಷ್ಯವನ್ನು ಪಠಿಸಿದರು. ನಂತರ ಮೂರು ಶ್ಲೋಕಗಳನ್ನು ಪಠಿಸಿ ಪ್ರವಚನವನ್ನು ಮುಗಿಸಿದರು. ಈ ಮೂರು ಶ್ಲೋಕಗಳು ಸರ್ವಶಕ್ತನಾದ ಅಲ್ಲಾಹನ ಸಂಪ್ರೀತಿಯನ್ನು ಬಯಸಿ, ಅವನ ಆಜ್ಞೆಗಳನ್ನು ಪಾಲಿಸುವ ಮೂಲಕ ಮತ್ತು ಅವನು ವಿರೋಧಿಸಿದ ಕಾರ್ಯಗಳಿಂದ ದೂರವಿರುವ ಮೂಲಕ ಅವನನ್ನು ಭಯಪಡಬೇಕೆಂಬ ಆಜ್ಞೆಯನ್ನು ಒಳಗೊಂಡಿವೆ. ಅದೇ ರೀತಿ ಹೀಗೆ ಅಲ್ಲಾಹನನ್ನು ಭಯಪಟ್ಟು ಜೀವಿಸುವವರಿಗೆ ಸಿಗುವ ಪ್ರತಿಫಲವೇನೆಂದರೆ, ಅವರ ಕರ್ಮಗಳು ಮತ್ತು ಮಾತುಗಳು ಸರಿಯಾಗುತ್ತವೆ, ಅವರ ಪಾಪಗಳನ್ನು ಕ್ಷಮಿಸಲಾಗುತ್ತದೆ ಮತ್ತು ಇಹಲೋಕದಲ್ಲಿ ಅವರಿಗೆ ಶುದ್ಧವಾದ ಜೀವನ ಮತ್ತು ಪರಲೋಕದಲ್ಲಿ ಸ್ವರ್ಗವು ಸಿಗುತ್ತದೆ.