ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ: ಅಲ್ಲಾಹು ಇಸ್ಲಾಂ ಧರ್ಮವನ್ನು ವಿವರಿಸಲು ನೇರ ಮಾರ್ಗದ ಒಂದು ಉದಾಹರಣೆಯನ್ನು ನೀಡುತ್ತಾನೆ. ಅದು ಉದ್ದಕ್ಕೆ ಚಾಚಿಕೊಂಡಿರುವ ಒಂದು ಮಾರ್ಗವಾಗಿದ್ದು ಅದರಲ್ಲಿ ಯಾವುದೇ ವಕ್ರತೆಗಳಿಲ್ಲ. ಆ ಮಾರ್ಗದ ಇಕ್ಕೆಲಗಳಲ್ಲಿ ಎರಡು ಗೋಡೆಗಳಿವೆ. ಆ ಗೋಡೆಗಳು ಆ ಮಾರ್ಗವನ್ನು ಎರಡು ಬದಿಗಳಿಂದಲೂ ಸುತ್ತುವರಿಯುತ್ತವೆ. ಈ ಗೋಡೆಗಳು ಅಲ್ಲಾಹನ ಗಡಿಗಳಾಗಿವೆ. ಈ ಎರಡೂ ಗೋಡೆಗಳಲ್ಲಿ ಅನೇಕ ಬಾಗಿಲುಗಳಿವೆ. ಇವು ಅಲ್ಲಾಹು ನಿಷೇಧಿಸಿದ ಕಾರ್ಯಗಳಾಗಿವೆ. ಆ ಬಾಗಿಲುಗಳಿಗೆ ಪರದೆಗಳನ್ನು ಹಾಕಲಾಗಿದ್ದು ಅದರೊಳಗಿರುವುದು ಹೊರಗಿನವರಿಗೆ ಕಾಣುವುದಿಲ್ಲ. ಆ ಮಾರ್ಗದ ಪ್ರವೇಶದ್ವಾರದಲ್ಲಿ ಒಬ್ಬ ವ್ಯಕ್ತಿಯಿದ್ದು ಆತ ಜನರಿಗೆ ಆದೇಶ ನಿರ್ದೇಶನಗಳನ್ನು ನೀಡುತ್ತಾ ಹೇಳುತ್ತಾನೆ: "ನೀವು ನೇರವಾಗಿ ನಡೆಯಿರಿ. ಅತ್ತಿತ್ತ ತಿರುಗಬೇಡಿ." ಇದು ಅಲ್ಲಾಹನ ಗ್ರಂಥ (ಕುರ್‌ಆನ್). ಆ ಮಾರ್ಗದ ಮೇಲ್ಭಾಗದಲ್ಲಿ ಇನ್ನೊಬ್ಬ ವ್ಯಕ್ತಿಯಿದ್ದಾನೆ. ನೇರಮಾರ್ಗದಲ್ಲಿ ನಡೆಯುವವರು ಆ ಬಾಗಿಲುಗಳಿಗೆ ಹಾಕಲಾದ ಪರದೆಗಳನ್ನು ಸ್ವಲ್ಪ ಸರಿಸಲು ಪ್ರಯತ್ನಿಸುವಾಗ ಆತ ಅವರನ್ನು ಗದರಿಸುತ್ತಾ ಹೇಳುತ್ತಾನೆ: "ನಿನಗೆ ದುರದೃಷ್ಟ ಕಾದಿದೆ! ಅದನ್ನು ತೆರೆಯಬೇಡ. ನೀನು ಅದನ್ನು ತೆರೆದು ಬಿಟ್ಟರೆ ಅದರೊಳಗೆ ಪ್ರವೇಶ ಮಾಡುವೆ. ಅದನ್ನು ಪ್ರವೇಶ ಮಾಡದಂತೆ ನಿನ್ನ ಮನಸ್ಸನ್ನು ನಿಯಂತ್ರಿಸಲು ನಿನಗೆ ಸಾಧ್ಯವಿಲ್ಲ." ಇದು ಪ್ರತಿಯೊಬ್ಬ ಮುಸಲ್ಮಾನನ ಹೃದಯದಲ್ಲಿರುವ ಅಲ್ಲಾಹನ ಕಡೆಯ ಆತ್ಮಸಾಕ್ಷಿಯಾಗಿದೆ.