ಇಬ್ನ್ ಅಬ್ಬಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುವುದೇನೆಂದರೆ, ಅವರು ಚಿಕ್ಕ ಹುಡುಗನಾಗಿದ್ದಾಗ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂದೆ ಕುಳಿತು ಪ್ರಯಾಣ ಮಾಡುತ್ತಿದ್ದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ನಿನಗೆ ಕೆಲವು ವಿಷಯಗಳನ್ನು ಕಲಿಸುತ್ತೇನೆ. ಅಲ್ಲಾಹು ಅವುಗಳನ್ನು ನಿನಗೆ ಪ್ರಯೋಜನಕಾರಿಯಾಗಿ ಮಾಡುವನು. ಅಲ್ಲಾಹನ ಆಜ್ಞೆಗಳನ್ನು ಪಾಲಿಸುವ ಮತ್ತು ಅವನ ನಿಷೇಧಗಳನ್ನು ತೊರೆಯುವ ಮೂಲಕ ಅವನನ್ನು ಸಂರಕ್ಷಿಸು. ಅವನು ನಿನ್ನನ್ನು ನೋಡುವಾಗ ನೀನು ಆರಾಧನೆ ಮತ್ತು ಧರ್ಮನಿಷ್ಠೆಯ ಕಾರ್ಯಗಳಲ್ಲಿರುವುದಾಗಿ ಕಾಣಬೇಕು. ನೀನು ಪಾಪ ಮತ್ತು ದುಷ್ಕೃತ್ಯಗಳಲ್ಲಿರುವುದಾಗಿ ಕಾಣಬಾರದು. ನೀನು ಹೀಗೆ ಮಾಡಿದರೆ, ಅದಕ್ಕೆ ಪ್ರತಿಫಲವಾಗಿ ಅಲ್ಲಾಹು ನಿನ್ನನ್ನು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ವಿಪತ್ತುಗಳು ಉಂಟಾಗದಂತೆ ರಕ್ಷಿಸುತ್ತಾನೆ. ನೀನು ಎಲ್ಲಿಗೆ ಹೋದರೂ ನಿನ್ನ ಕಾರ್ಯಗಳಲ್ಲಿ ಅವನು ನಿನಗೆ ಸಹಾಯ ಮಾಡುತ್ತಾನೆ. ನೀನು ಏನಾದರೂ ಕೇಳಲು ಬಯಸಿದರೆ, ಅಲ್ಲಾಹನಲ್ಲಿ ಹೊರತು ಯಾರಲ್ಲೂ ಕೇಳಬೇಡ. ಏಕೆಂದರೆ ಬೇಡುವವರಿಗೆ ಉತ್ತರ ನೀಡುವವನು ಅವನು ಮಾತ್ರ. ನಿನಗೆ ಏನಾದರೂ ಸಹಾಯ ಬೇಕಾದರೆ ಅಲ್ಲಾಹನ ಹೊರತು ಯಾರಲ್ಲೂ ಸಹಾಯ ಯಾಚಿಸಬೇಡ. ಭೂಮಿಯಲ್ಲಿರುವ ಎಲ್ಲರೂ ನಿನಗೊಂದು ಉಪಕಾರ ಮಾಡಲು ಬಯಸಿ ಒಟ್ಟುಗೂಡಿದರೆ, ಅಲ್ಲಾಹು ನಿನಗೆ ನಿಗದಿಪಡಿಸಿದ ಉಪಕಾರವನ್ನಲ್ಲದೆ ಬೇರೇನನ್ನೂ ಮಾಡಲು ಅವರಿಗೆ ಸಾಧ್ಯವಿಲ್ಲ; ಮತ್ತು ಭೂಮಿಯಲ್ಲಿರುವ ಎಲ್ಲರೂ ನಿನಗೆ ತೊಂದರೆ ಮಾಡಲು ಬಯಸಿ ಒಟ್ಟುಗೂಡಿದರೆ, ಅಲ್ಲಾಹು ನಿನಗೆ ನಿರ್ಣಯಿಸಿದ ತೊಂದರೆಯನ್ನಲ್ಲದೆ ಬೇರೇನನ್ನೂ ಮಾಡಲು ಅವರಿಗೆ ಸಾಧ್ಯವಿಲ್ಲ ಎಂಬ ದೃಢವಿಶ್ವಾಸ ನಿನಗಿರಲಿ. ಸರ್ವಶಕ್ತನಾದ ಅಲ್ಲಾಹು ತನ್ನ ಯುಕ್ತಿ ಮತ್ತು ಜ್ಞಾನದ ಪ್ರಕಾರ ಇದನ್ನು ಈಗಾಗಲೇ ಲಿಖಿತಗೊಳಿಸಿದ್ದಾನೆ ಮತ್ತು ಈಗಾಗಲೇ ನಿರ್ಧರಿಸಿದ್ದಾನೆ. ಅಲ್ಲಾಹು ಲಿಖಿತಗೊಳಿಸಿದ್ದನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ.