ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಮಹಾಪ್ರಳಯದ ಕೆಲವು ಚಿಹ್ನೆಗಳನ್ನು ವಿವರಿಸುತ್ತಾರೆ. ಅವುಗಳಲ್ಲೊಂದು ಸೂರ್ಯ ಪೂರ್ವದ ಬದಲು ಪಶ್ಚಿಮದಿಂದ ಉದಯವಾಗುವುದು. ಅದನ್ನು ನೋಡಿದಾಗ ಜನರೆಲ್ಲರೂ ವಿಶ್ವಾಸವಿಡುತ್ತಾರೆ. ಆ ಸಮಯದಲ್ಲಿ ವಿಶ್ವಾಸವಿಡುವುದರಿಂದ, ಸತ್ಕರ್ಮ ಮಾಡುವುದರಿಂದ ಅಥವಾ ಪಶ್ಚಾತಾಪ ಪಡುವುದರಿಂದ ಸತ್ಯನಿಷೇಧಿಗೆ ಯಾವುದೇ ಪ್ರಯೋಜನವಿಲ್ಲ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಳಯವು ಹಠಾತ್ತಾಗಿ ಸಂಭವಿಸುತ್ತದೆ ಎಂದು ಹೇಳುತ್ತಾರೆ. ಅಂದರೆ, ಜನರು ಅವರ ದೈನಂದಿನ ಕೆಲಸಗಳಲ್ಲಿ ಮುಳುಗಿರುವಾಗಲೇ ಪ್ರಳಯ ಸಂಭವಿಸುತ್ತದೆ. ಬಟ್ಟೆ ವ್ಯಾಪಾರಿ ಗ್ರಾಹಕನಿಗೆ ಬಟ್ಟೆಯನ್ನು ಹರಡಿ ತೋರಿಸುತ್ತಿರುವಾಗ ಗ್ರಾಹಕ ಅದನ್ನು ಖರೀದಿಸುವುದಕ್ಕೆ ಮುಂಚೆ ಅಥವಾ ಮಡಚಿಡುವುದಕ್ಕೆ ಮುಂಚೆ ಹಠಾತ್ತಾಗಿ ಪ್ರಳಯವು ಸಂಭವಿಸುತ್ತದೆ. ಒಬ್ಬ ವ್ಯಕ್ತಿ ಒಂಟೆಯ ಹಾಲನ್ನು ಕರೆದು ಅದನ್ನು ಕುಡಿಯುವಷ್ಟರಲ್ಲಿ ಹಠಾತ್ತಾಗಿ ಪ್ರಳಯವು ಸಂಭವಿಸುತ್ತದೆ. ಒಬ್ಬ ವ್ಯಕ್ತಿ ತನ್ನ ನೀರಿನ ಕೊಳವನ್ನು ಗಾರೆಯಿಂದ ಸರಿಪಡಿಸಿ ಅದಕ್ಕೆ ನೀರು ತುಂಬುವ ಮೊದಲೇ ಹಠಾತ್ತಾಗಿ ಪ್ರಳಯವು ಸಂಭವಿಸುತ್ತದೆ. ಒಬ್ಬ ವ್ಯಕ್ತಿ ಆಹಾರ ಸೇವಿಸಲು ತುತ್ತನ್ನು ಎತ್ತಿ ಬಾಯಿಗಿಡುವ ಮೊದಲೇ ಹಠಾತ್ತಾಗಿ ಪ್ರಳಯವು ಸಂಭವಿಸುತ್ತದೆ.