ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸಮೀಪದಲ್ಲಿ ಒಂದು ಕಾಲವು ಬರಲಿದೆ. ಆಗ ಜನರಲ್ಲಿ ಒಬ್ಬನು ಆರಾಮಕುರ್ಚಿಯಲ್ಲಿ ಒರಗಿಕೊಂಡಿರುತ್ತಾನೆ. ನನ್ನ ಒಂದು ಹದೀಸನ್ನು ಅವನ ಮುಂದೆ ಪಠಿಸಲಾಗುತ್ತದೆ. ಆಗ ಅವನು ಹೇಳುತ್ತಾನೆ: ನಮ್ಮ ವಿಷಯದಲ್ಲಿ ಪವಿತ್ರ ಕುರ್‌ಆನ್ ತೀರ್ಪು ನೀಡುತ್ತದೆ. ಅದು ನಮಗೆ ಯಥೇಷ್ಟ ಸಾಕು. ಅದರಲ್ಲಿ ಏನು ಅನುಮತಿಸಲಾಗಿದೆಯೆಂದು ನಾವು ಕಾಣುತ್ತೇವೆಯೋ, ಅದನ್ನು ನಾವು ಸ್ವೀಕರಿಸುತ್ತೇವೆ. ಅದರಲ್ಲಿ ಏನು ನಿಷೇಧಿಸಲಾಗಿದೆಯೆಂದು ನಾವು ಕಾಣುತ್ತೇವೆಯೋ, ಅದನ್ನು ನಾವು ತಿರಸ್ಕರಿಸುತ್ತೇವೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸುನ್ನತ್‌ನಲ್ಲಿ (ಹದೀಸ್‌ನಲ್ಲಿ) ನಿಷೇಧಿಸಲಾಗಿರುವ ಅಥವಾ ವಿರೋಧಿಸಲಾಗಿರುವ ವಿಷಯಗಳೆಲ್ಲವೂ ಪವಿತ್ರ ಕುರ್‌ಆನಿನಲ್ಲಿ ಅಲ್ಲಾಹು ನಿಷೇಧಿಸಿರುವ ವಿಷಯಗಳ ಅದೇ ನಿಯಮವನ್ನು ಹೊಂದಿವೆ ಎಂದು ತಿಳಿಸುತ್ತಾರೆ. ಏಕೆಂದರೆ ಅವರು ಅಲ್ಲಾಹನ ಸಂದೇಶವನ್ನು ಜನರಿಗೆ ತಲುಪಿಸಿಕೊಡುವವರು.