ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ಸ್ವರ್ಗ ಮತ್ತು ನರಕವನ್ನು ಸೃಷ್ಟಿಸಿದ ನಂತರ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ರನ್ನು ಕರೆದು ಹೇಳಿದನು: "ಸ್ವರ್ಗಕ್ಕೆ ಹೋಗಿ ಅದನ್ನು ನೋಡಿ ಬಾ." ಅವರು ಸ್ವರ್ಗಕ್ಕೆ ಹೋಗಿ ಅದನ್ನು ನೋಡಿ ಮರಳಿ ಬಂದರು. ಜಿಬ್ರೀಲ್ ಹೇಳಿದರು: "ಓ ನನ್ನ ಪರಿಪಾಲಕನೇ! ನಿನ್ನ ಪ್ರತಿಷ್ಠೆಯ ಮೇಲಾಣೆ. ಆ ಸ್ವರ್ಗದ ಬಗ್ಗೆ ಮತ್ತು ಅಲ್ಲಿರುವ ಸವಲತ್ತುಗಳು, ಗೌರವಗಳು ಮತ್ತು ಒಳಿತುಗಳ ಬಗ್ಗೆ ಕೇಳಿದ ಯಾವುದೇ ವ್ಯಕ್ತಿಯೂ ಅದನ್ನು ಪ್ರವೇಶಿಸಲು ಇಷ್ಟಪಡದೇ ಇರಲಾರ ಮತ್ತು ಅದಕ್ಕಾಗಿ ಪರಿಶ್ರಮಿಸದೇ ಇರಲಾರ." ನಂತರ ಅಲ್ಲಾಹು ಸ್ವರ್ಗದ ಸುತ್ತಲೂ, ಅಲ್ಲಾಹನ ಆಜ್ಞೆಗಳನ್ನು ಪಾಲಿಸಬೇಕು ಮತ್ತು ಅವನು ವಿರೋಧಿಸಿದ ಕಾರ್ಯಗಳಿಂದ ದೂರವಾಗಬೇಕು ಎಂಬ ಕಷ್ಟಗಳಿಂದ ತುಂಬಿದನು. ಸ್ವರ್ಗವನ್ನು ಪ್ರವೇಶಿಸಲು ಬಯಸುವವನು ಈ ಕಷ್ಟಗಳನ್ನು ದಾಟಿ ಹೋಗಬೇಕು ನಂತರ ಸರ್ವಶಕ್ತನಾದ ಅಲ್ಲಾಹು ಹೇಳಿದನು: "ಓ ಜಿಬ್ರೀಲ್! ನಾನು ಸ್ವರ್ಗದ ಸುತ್ತಲೂ ಕಷ್ಟಗಳನ್ನು ತುಂಬಿದ್ದೇನೆ. ಹೋಗಿ ಅದನ್ನು ನೋಡಿ ಬಾ." ಅವರು ಹೋಗಿ ಅದನ್ನು ನೋಡಿ ಮರಳಿ ಬಂದು ಹೇಳಿದರು: "ಓ ನನ್ನ ಪರಿಪಾಲಕನೇ! ನಿನ್ನ ಪ್ರತಿಷ್ಠೆಯ ಮೇಲಾಣೆ. ಅದರ ಮಾರ್ಗದಲ್ಲಿರುವ ಈ ಕಷ್ಟಗಳು ಮತ್ತು ಪರಿಶ್ರಮಗಳಿಂದಾಗಿ ಯಾರಿಗೂ ಅದನ್ನು ಪ್ರವೇಶಿಸಲು ಸಾಧ್ಯವಾಗಲಾರದೆಂದು ನನಗೆ ಭಯವಾಗುತ್ತಿದೆ." ಹಾಗೆಯೇ, ನರಕವನ್ನು ಸೃಷ್ಟಿಸಿದ ನಂತರ ಅಲ್ಲಾಹು ಹೇಳಿದನು: "ಓ ಜಿಬ್ರೀಲ್! ಹೋಗಿ ಅದನ್ನು ನೋಡಿ ಬಾ." ಅವರು ಹೋಗಿ ಅದನ್ನು ನೋಡಿದರು. ನಂತರ ಹಿಂದಿರುಗಿ ಬಂದು ಜಿಬ್ರೀಲ್ ಹೇಳಿದರು: "ಓ ನನ್ನ ಪರಿಪಾಲಕನೇ! ನಿನ್ನ ಪ್ರತಿಷ್ಠೆಯ ಮೇಲಾಣೆ. ಆ ನರಕದರಲ್ಲಿರುವ ಶಿಕ್ಷೆಗಳು, ಕಷ್ಟಗಳು ಮತ್ತು ಹಿಂಸೆಗಳ ಬಗ್ಗೆ ಕೇಳಿದ ಯಾವುದೇ ವ್ಯಕ್ತಿಯೂ ಅದನ್ನು ಪ್ರವೇಶಿಸಲು ಅಸಹ್ಯಪಡದೇ ಇರಲಾರ ಮತ್ತು ಅದಕ್ಕೆ ಸಾಗಿಸುವ ಎಲ್ಲ ಮಾರ್ಗಗಳಿಂದ ದೂರವಾಗದೇ ಇರಲಾರ." ನಂತರ ಅಲ್ಲಾಹು ನರಕವನ್ನು ಮತ್ತು ಅದಕ್ಕೆ ಸಾಗುವ ಮಾರ್ಗಗಳನ್ನು ಮೋಹಗಳಿಂದ ಮತ್ತು ವಿಲಾಸಗಳಿಂದ ತುಂಬಿದನು. ನಂತರ ಹೇಳಿದನು: "ಓ ಜಿಬ್ರೀಲ್! ಹೋಗಿ ಅದನ್ನು ನೋಡಿ ಬಾ." ಜಿಬ್ರೀಲ್ ಹೋಗಿ ಅದನ್ನು ನೋಡಿ ಮರಳಿ ಬಂದು ಹೇಳಿದರು: "ಓ ನನ್ನ ಪರಿಪಾಲಕನೇ! ನಿನ್ನ ಪ್ರತಿಷ್ಠೆಯ ಮೇಲಾಣೆ. ನರಕದ ಸುತ್ತಲೂ ಮೋಹಗಳು ಮತ್ತು ವಿಲಾಸಗಳು ತುಂಬಿಕೊಂಡಿರುವುದರಿಂದ ಯಾರಿಗೂ ಅದರಿಂದ ಬಚಾವಾಗಲು ಸಾಧ್ಯವಾಗಲಾರದೆಂದು ನನಗೆ ಭಯವಾಗುತ್ತಿದೆ."