ನಿಮ್ಮ ಪೈಕಿ ಯಾರನ್ನಾದರೂ ಆಪ್ತಮಿತ್ರನನ್ನಾಗಿ ಮಾಡಿಕೊಳ್ಳುವುದರಿಂದ ನಾನು ಅಲ್ಲಾಹನ ಮುಂದೆ ಸಂಪೂರ್ಣ ವಿಮುಕ್ತನಾಗಿದ್ದೇನೆ. ಏಕೆಂದರೆ ಸರ್ವಶಕ್ತನಾದ ಅಲ್ಲಾಹು ಇಬ್ರಾಹೀಮರನ್ನು ಆಪ್ತಮಿತ್ರನನ್ನಾಗಿ ಮಾಡಿಕೊಂಡಂತೆ ನನ್ನನ್ನು ಕೂಡ ಅವನ ಆಪ್ತಮಿತ್ರನನ್ನಾಗಿ ಮಾಡಿಕೊಂಡಿದ್ದಾನೆ...

ಜುಂದುಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಧನಕ್ಕೆ ಐದು ದಿನ ಮೊದಲು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಿಮ್ಮ ಪೈಕಿ ಯಾರನ್ನಾದರೂ ಆಪ್ತಮಿತ್ರನನ್ನಾಗಿ ಮಾಡಿಕೊಳ್ಳುವುದರಿಂದ ನಾನು ಅಲ್ಲಾಹನ ಮುಂದೆ ಸಂಪೂರ್ಣ ವಿಮುಕ್ತನಾಗಿದ್ದೇನೆ. ಏಕೆಂದರೆ ಸರ್ವಶಕ್ತನಾದ ಅಲ್ಲಾಹು ಇಬ್ರಾಹೀಮರನ್ನು ಆಪ್ತಮಿತ್ರನನ್ನಾಗಿ ಮಾಡಿಕೊಂಡಂತೆ ನನ್ನನ್ನು ಕೂಡ ಅವನ ಆಪ್ತಮಿತ್ರನನ್ನಾಗಿ ಮಾಡಿಕೊಂಡಿದ್ದಾನೆ. ನಾನು ನನ್ನ ಸಮುದಾಯದಲ್ಲಿ ಯಾರನ್ನಾದರೂ ಆಪ್ತಮಿತ್ರನನ್ನಾಗಿ ಮಾಡಿಕೊಳ್ಳುತ್ತಿದ್ದರೆ, ಅಬೂಬಕರ್ ರನ್ನು ಆಪ್ತಮಿತ್ರನನ್ನಾಗಿ ಮಾಡಿಕೊಳ್ಳುತ್ತಿದ್ದೆ, ಎಚ್ಚರಾ! ನಿಶ್ಚಯವಾಗಿಯೂ ನಿಮಗಿಂತ ಮೊದಲಿನವರು ಅವರ ಪ್ರವಾದಿಗಳ ಮತ್ತು ಮಹಾಪುರುಷರ ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಳ್ಳುತ್ತಿದ್ದರು. ಎಚ್ಚರಾ! ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಳ್ಳಬೇಡಿ. ನಾನು ನಿಮಗೆ ಅದನ್ನು ವಿರೋಧಿಸುತ್ತೇನೆ."
Sahih/Authentic. - Muslim

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅಲ್ಲಾಹನ ಬಳಿ ತಮಗಿರುವ ಸ್ಥಾನಮಾನದ ಬಗ್ಗೆ ವಿವರಿಸುತ್ತಾರೆ. ಅವರು ಅಲ್ಲಾಹನ ಅತ್ಯಂತ ಆಪ್ತರ ಸ್ಥಾನವನ್ನು ತಲುಪಿದ್ದಾರೆ. ಇಬ್ರಾಹೀಂ (ಅವರ ಮೇಲೆ ಶಾಂತಿಯಿರಲಿ) ಕೂಡ ಈ ಸ್ಥಾನವನ್ನು ತಲುಪಿದ್ದರು. ಆದ್ದರಿಂದ ತನಗೆ ಅಲ್ಲಾಹನ ಹೊರತು ಬೇರೆ ಆಪ್ತಮಿತ್ರರು ಇರುವುದನ್ನು ಅವರು ನಿಷೇಧಿಸುತ್ತಾರೆ. ಏಕೆಂದರೆ, ಅವರ ಹೃದಯದಲ್ಲಿ ಅಲ್ಲಾಹನ ಪ್ರೀತಿ, ಗೌರವ ಮತ್ತು ಜ್ಞಾನವು ತುಂಬಿಕೊಂಡಿದೆ. ಅಲ್ಲಿ ಅಲ್ಲಾಹನ ಹೊರತು ಬೇರೆ ಯಾರಿಗೂ ಸ್ಥಳವಿಲ್ಲ. ಒಂದು ವೇಳೆ ಜನರಲ್ಲಿ ಯಾರನ್ನಾದರೂ ಆಪ್ತಮಿತ್ರನನ್ನಾಗಿ ಮಾಡಿಕೊಳ್ಳಲು ಬಯಸುತ್ತಿದ್ದರೆ, ಅವರು ಅಬೂಬಕರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರನ್ನೇ ಆರಿಸುತ್ತಿದ್ದರು. ನಂತರ ಅವರು ಎಲ್ಲೆ ಮೀರುವ ಪ್ರೀತಿಯ ಬಗ್ಗೆ ಎಚ್ಚರಿಕೆ ನೀಡಿದರು. ಎಲ್ಲೆ ಮೀರಿದ ಪ್ರೀತಿಯಿಂದಲೇ ಯಹೂದಿಗಳು ಮತ್ತು ಕ್ರಿಶ್ಚಿಯನ್ನರು ಅವರ ಪ್ರವಾದಿಗಳ ಹಾಗೂ ಮಹಾಪುರುಷರ ಸಮಾಧಿಗಳನ್ನು ಎಲ್ಲೆ ಮೀರಿ ಗೌರವಿಸಿದರು. ಹೀಗೆ ಅವು ಅಲ್ಲಾಹನ ಹೊರತಾಗಿ ಆರಾಧಿಸಲ್ಪಡುವ ದೇವರುಗಳಾಗಿ ಪರಿವರ್ತನೆ ಹೊಂದಿದವು; ಮತ್ತು ಅವರು ಆ ಸಮಾಧಿಗಳ ಮೇಲೆ ಆರಾಧನಾಲಯಗಳನ್ನು ಹಾಗೂ ಮಠಗಳನ್ನು ನಿರ್ಮಿಸಿದರು. ನಂತರ ಅವರಂತೆ ನೀವಾಗಬಾರದು ಎಂಬ ಕಾರಣಕ್ಕೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡುವುದನ್ನು ತಮ್ಮ ಸಮುದಾಯಕ್ಕೆ ವಿರೋಧಿಸಿದರು.

  1. ಈ ಹದೀಸ್ ಅಬೂಬಕರ್ ಸಿದ್ದೀಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಶ್ರೇಷ್ಠತೆಯನ್ನು ತಿಳಿಸುತ್ತದೆ. ಅವರು ಪ್ರವಾದಿಯವರ ಸಂಗಡಿಗರಲ್ಲಿ ಅತ್ಯುತ್ತಮರು, ಹಾಗೂ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಧನದ ಬಳಿಕ ಅವರ ಉತ್ತರಾಧಿಕಾರಿಯಾಗಲು ಹೆಚ್ಚು ಅರ್ಹರು ಎಂದು ಈ ಹದೀಸಿನಿಂದ ತಿಳಿಯುತ್ತದೆ.
  2. ಸಮಾಧಿಗಳ ಮೇಲೆ ಆರಾಧನಾಲಯಗಳನ್ನು ನಿರ್ಮಿಸುವುದು ಹಿಂದಿನ ಸಮುದಾಯಗಳು ಮಾಡಿದ ನೀಚಕೃತ್ಯಗಳಾಗಿವೆಂದು ಈ ಹದೀಸಿನಲ್ಲಿ ತಿಳಿಸಲಾಗಿದೆ.
  3. ಸಮಾಧಿಗಳನ್ನು ಆರಾಧನಾ ಸ್ಥಳಗಳಾಗಿ ಮಾಡಿಕೊಂಡು, ಅವುಗಳ ಬಳಿ ಅಥವಾ ಅವುಗಳಿಗೆ ತಿರುಗಿ ನಮಾಝ್ ಮಾಡುವುದು, ಅವುಗಳ ಮೇಲೆ ಆರಾಧನಾಲಯಗಳನ್ನು ಅಥವಾ ಗುಮ್ಮಟಗಳನ್ನು ನಿರ್ಮಿಸುವುದು ಮುಂತಾದವುಗಳನ್ನು ಈ ಹದೀಸಿನಲ್ಲಿ ವಿರೋಧಿಸಲಾಗಿದೆ. ಇದರಿಂದ ಬಹುದೇವಾರಾಧನೆ (ಶಿರ್ಕ್) ಉಂಟಾಗಬಾರದು ಎಂಬ ಕಾರಣದಿಂದಲೇ ಇದರ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
  4. ಮಹಾಪುರುಷರ ವಿಷಯದಲ್ಲಿ ಎಲ್ಲೆ ಮೀರಿ ವರ್ತಿಸಬಾರದೆಂದು ಈ ಹದೀಸಿನಲ್ಲಿ ಎಚ್ಚರಿಕೆ ನೀಡಲಾಗಿದೆ. ಏಕೆಂದರೆ ಅದು ಬಹುದೇವಾರಾಧನೆಗೆ ಕಾರಣವಾಗುತ್ತದೆ.
  5. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಹದೀಸಿನಲ್ಲಿ ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಳ್ಳಬಾರದೆಂದು ಎಚ್ಚರಿಕೆ ನೀಡಿದ ಶೈಲಿಯು ಅದರ ಅಪಾಯವನ್ನು ಮನದಟ್ಟು ಮಾಡುತ್ತದೆ. ಏಕೆಂದರೆ, ಅವರು ತಮ್ಮ ನಿಧನಕ್ಕೆ ಐದು ದಿನಗಳ ಮೊದಲು ಇದರ ಬಗ್ಗೆ ಪ್ರಬಲವಾಗಿ ಎಚ್ಚರಿಸಿದ್ದಾರೆ.

ಯಶಸ್ವಿಯಾಗಿ ರವಾನಿಸಲಾಗಿದೆ!