ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸುವುದರ ಶ್ರೇಷ್ಠತೆಯನ್ನು ವಿವರಿಸುತ್ತಿದ್ದಾರೆ. ಅಂದರೆ ಒಬ್ಬ ವ್ಕಕ್ತಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ನಂತರ ಇಸ್ಲಾಂ ಧರ್ಮದಲ್ಲಿ ನಿಷ್ಕಳಂಕತೆ ಮತ್ತು ಪ್ರಾಮಾಣಿಕತೆಯೊಂದಿಗೆ ಒಳ್ಳೆಯ ಕರ್ಮಗಳನ್ನು ಮಾಡಿದರೆ, ಅಜ್ಞಾನ ಕಾಲದಲ್ಲಿ (ಇಸ್ಲಾಮೀ ಪೂರ್ವ ಕಾಲದಲ್ಲಿ) ಮಾಡಿದ ಪಾಪಗಳು ಮತ್ತು ದುಷ್ಕರ್ಮಗಳಿಗಾಗಿ ಅವನು ವಿಚಾರಣೆ ಎದುರಿಸಬೇಕಾಗಿ ಬರುವುದಿಲ್ಲ. ಆದರೆ ಒಬ್ಬ ವ್ಯಕ್ತಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ನಂತರ ಕೆಟ್ಟ ಕೃತ್ಯಗಳನ್ನು ಮಾಡಿದರೆ, ಅಂದರೆ ಅವನು ಕಪಟ ವಿಶ್ವಾಸಿಯಾದರೆ ಅಥವಾ ಧರ್ಮಪರಿತ್ಯಾಗಿಯಾದರೆ, ಅವನು ಸತ್ಯನಿಷೇಧದಲ್ಲಿದ್ದಾಗ ಮಾಡಿದ ದುಷ್ಕರ್ಮಗಳಿಗೆ ಮತ್ತು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ನಂತರ ಮಾಡಿದ ದುಷ್ಕರ್ಮಗಳಿಗೆ ವಿಚಾರಣೆ ಎದುರಿಸಬೇಕಾಗುತ್ತದೆ.