ಅವರು ಒಂದು ದಿನವೂ, 'ಓ ನನ್ನ ಪರಿಪಾಲಕನೇ! ಪ್ರತಿಫಲ ದಿನದಂದು ನನ್ನ ಪಾಪಗಳನ್ನು ಕ್ಷಮಿಸು' ಎಂದು ಹೇಳಿಲ್ಲ

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಹೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಅಜ್ಞಾನ ಕಾಲದಲ್ಲಿ ಇಬ್ನ್ ಜುದ್‌ಆನ್ ಕುಟುಂಬ ಸಂಬಂಧಗಳನ್ನು ಜೋಡಿಸುತ್ತಿದ್ದರು ಮತ್ತು ಬಡವರಿಗೆ ಅನ್ನದಾನ ಮಾಡುತ್ತಿದ್ದರು. ಅವರಿಗೆ ಅದು ಉಪಕರಿಸುತ್ತದೆಯೇ?" ಅವರು ಹೇಳಿದರು: “ಇಲ್ಲ, ಅವರಿಗೆ ಅದು ಉಪಕರಿಸುವುದಿಲ್ಲ. ಏಕೆಂದರೆ ಅವರು ಒಂದು ದಿನವೂ, 'ಓ ನನ್ನ ಪರಿಪಾಲಕನೇ! ಪ್ರತಿಫಲ ದಿನದಂದು ನನ್ನ ಪಾಪಗಳನ್ನು ಕ್ಷಮಿಸು' ಎಂದು ಹೇಳಿಲ್ಲ."
Sahih/Authentic. - Muslim

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಅಬ್ದುಲ್ಲಾ ಬಿನ್ ಜುದ್‌ಆನ್ ಎಂಬ ವ್ಯಕ್ತಿಯ ಬಗ್ಗೆ ತಿಳಿಸುತ್ತಾರೆ. ಅವರು ಇಸ್ಲಾಂ ಪೂರ್ವ ಕಾಲದಲ್ಲಿ ಕುರೈಷ್ ಮುಖಂಡರಲ್ಲಿ ಒಬ್ಬರಾಗಿದ್ದರು. ಅವರು ಮಾಡುತ್ತಿದ್ದ ಕೆಲವು ಸತ್ಕಾರ್ಯಗಳೇನೆಂದರೆ, ಕುಟುಂಬ ಸಂಬಂಧವನ್ನು ಜೋಡಿಸುವುದು, ಕುಟುಂಬಿಕರಿಗೆ ಸಹಾಯ ಮಾಡುವುದು, ಬಡವರಿಗೆ ಅನ್ನದಾನ ಮಾಡುವುದು ಮತ್ತು ಇಸ್ಲಾಂ ಧರ್ಮವು ಪ್ರೋತ್ಸಾಹಿಸಿದ ಅನೇಕ ಸತ್ಕಾರ್ಯಗಳನ್ನು ಅವರು ಮಾಡುತ್ತಿದ್ದರು. ಆದರೆ ಈ ಸತ್ಕಾರ್ಯಗಳು ಪರಲೋಕದಲ್ಲಿ ಅವರಿಗೆ ಉಪಕರಿಸುವುದಿಲ್ಲವೆಂದು ಪ್ರವಾದಿಯವರು ಹೇಳುತ್ತಾರೆ. ಏಕೆಂದರೆ ಆತ ಸತ್ಯನಿಷೇಧಿಯಾಗಿದ್ದ ಮತ್ತು ಜೀವನದಲ್ಲಿ ಒಮ್ಮೆಯೂ "ಓ ನನ್ನ ಪರಿಪಾಲಕನೇ! ಪ್ರತಿಫಲ ದಿನದಂದು ನನ್ನ ಪಾಪಗಳನ್ನು ಕ್ಷಮಿಸು" ಎಂದು ಹೇಳಿರಲಿಲ್ಲ.

  1. ಈ ಹದೀಸ್ ಸತ್ಯವಿಶ್ವಾಸದ ಶ್ರೇಷ್ಠತೆಯನ್ನು ಮತ್ತು ಕರ್ಮಗಳ ಸ್ವೀಕಾರಕ್ಕೆ ಅದು ಷರತ್ತಾಗಿದೆ ಎಂದು ತಿಳಿಸುತ್ತದೆ.
  2. ಈ ಹದೀಸ್ ಸತ್ಯನಿಷೇಧದ ದುಷ್ಫಲವನ್ನು ಮತ್ತು ಅದು ಸತ್ಕರ್ಮಗಳನ್ನು ನಿಷ್ಫಲಗೊಳಿಸುತ್ತದೆ ಎಂದು ತಿಳಿಸುತ್ತದೆ.
  3. ಅಲ್ಲಾಹನಲ್ಲಿ ಮತ್ತು ಅಂತ್ಯ ದಿನದಲ್ಲಿ ವಿಶ್ವಾಸವಿಡದ ಕಾರಣ, ಸತ್ಯನಿಷೇಧಿಗಳಿಗೆ ಅವರ ಕರ್ಮಗಳು ಪರಲೋಕದಲ್ಲಿ ಉಪಕಾರ ನೀಡುವುದಿಲ್ಲ ಎಂದು ಈ ಹದೀಸ್ ತಿಳಿಸುತ್ತದೆ.
  4. ಮನುಷ್ಯನು ಸತ್ಯನಿಷೇಧಿಯಾಗಿದ್ದಾಗ ಮಾಡಿದ ಕರ್ಮಗಳನ್ನು ಅವನು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ಬಳಿಕವೂ ಅವನ ಹೆಸರಿಗೆ ದಾಖಲಿಸಲಾಗುತ್ತದೆ, ಮತ್ತು ಅದಕ್ಕೆ ಅನುಗುಣವಾಗಿ ಅವನಿಗೆ ಪ್ರತಿಫಲ ನೀಡಲಾಗುತ್ತದೆ.

ಯಶಸ್ವಿಯಾಗಿ ರವಾನಿಸಲಾಗಿದೆ!