ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸತ್ಯವಿಶ್ವಾಸಿಗಳ ಮೇಲೆ ಅಲ್ಲಾಹನಿಗಿರುವ ಮಹಾ ಉದಾರತೆಯನ್ನು, ಮತ್ತು ಸತ್ಯನಿಷೇಧಿಗಳೊಂದಿಗೆ ಅವನು ತೋರಿಸುವ ನ್ಯಾಯವನ್ನು ವಿವರಿಸುತ್ತಾರೆ. ಸತ್ಯವಿಶ್ವಾಸಿ ಮಾಡಿದ ಯಾವುದೇ ಸತ್ಕರ್ಮದ ಪ್ರತಿಫಲವು ಅವನಿಗೆ ನಷ್ಟವಾಗುವುದಿಲ್ಲ. ಬದಲಿಗೆ, ಪರಲೋಕದಲ್ಲಿ ಅವನಿಗೆ ಪ್ರತಿಫಲ ನೀಡಲಾಗುವುದರ ಜೊತೆಗೆ ಇಹಲೋಕದಲ್ಲೂ ಅವನು ತೋರಿದ ವಿಧೇಯತೆಗೆ ಅವನಿಗೆ ಪ್ರತಿಫಲವನ್ನು ನೀಡಲಾಗುತ್ತದೆ. ಪರಲೋಕದಲ್ಲಿ ಅವೆಲ್ಲದರ ಪ್ರತಿಫಲವನ್ನು ಅವನಿಗೆ ಸಂರಕ್ಷಿಸಿ ಇಡಲಾಗುವುದು. ಆದರೆ ಸತ್ಯನಿಷೇಧಿಯು ಇಹಲೋಕದಲ್ಲಿ ಮಾಡಿದ ಒಳಿತುಗಳಿಗೆ ಅಲ್ಲಾಹು ಇಹಲೋಕದಲ್ಲೇ ಪ್ರತಿಫಲವನ್ನು ನೀಡುವನು. ಹೀಗೆ ಅವನು ಪರಲೋಕಕ್ಕೆ ತಲುಪಿದರೆ ಅಲ್ಲಿ ಅವನಿಗೆ ನೀಡಲು ಯಾವುದೇ ಪ್ರತಿಫಲವು ಉಳಿದಿರುವುದಿಲ್ಲ. ಏಕೆಂದರೆ ಸತ್ಕರ್ಮಗಳಿಗೆ ಪರಲೋಕದಲ್ಲಿ ಪ್ರತಿಫಲ ಸಿಗಬೇಕಾದರೆ ಅದನ್ನು ಮಾಡುವ ವ್ಯಕ್ತಿ ಸತ್ಯವಿಶ್ವಾಸಿಯಾಗಿರಬೇಕು.