ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರನ್ನು ಯಮನ್‌ಗೆ ಧರ್ಮಪ್ರಚಾರಕರಾಗಿ ಮತ್ತು ಬೋಧಕರಾಗಿ ಕಳುಹಿಸುವಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರೊಡನೆ, ಅಲ್ಲಿನ ಜನತೆ ಕ್ರಿಶ್ಚಿಯನ್ನರಾಗಿರುವುದರಿಂದ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು, ನಂತರ ಅತ್ಯಂತ ಪ್ರಾಮುಖ್ಯವಾದ ವಿಷಯಗಳನ್ನು ಮೊದಲು ಬೋಧಿಸಬೇಕು ಎಂದು ವಿವರಿಸಿಕೊಟ್ಟರು. ಮೊದಲು ಅವರ ವಿಶ್ವಾಸವನ್ನು ಸರಿಪಡಿಸಲು, ಅಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯರಿಲ್ಲ ಮತ್ತು ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಸಂದೇಶವಾಹಕರೆಂದು ಸಾಕ್ಷಿ ವಹಿಸಲು ಅವರನ್ನು ಆಹ್ವಾನಿಸಬೇಕು. ಇದರ ಮೂಲಕ ಅವರು ಇಸ್ಲಾಂ ಧರ್ಮವನ್ನು ಪ್ರವೇಶಿಸುತ್ತಾರೆ. ಅವರು ಅದನ್ನು ಅನುಸರಿಸಿದರೆ ನಮಾಝ್ ಸಂಸ್ಥಾಪಿಸಲು ಅವರಿಗೆ ಆದೇಶ ನೀಡಬೇಕು. ಏಕೆಂದರೆ, ನಮಾಝ್ ಏಕದೇವವಿಶ್ವಾಸದ ನಂತರದ ಸ್ಥಾನದಲ್ಲಿರುವ ಅತಿದೊಡ್ಡ ಕಡ್ಡಾಯ ಕಾರ್ಯವಾಗಿದೆ. ಅವರು ನಮಾಝ್ ಸಂಸ್ಥಾಪಿಸಿದರೆ, ಅವರಲ್ಲಿರುವ ಶ್ರೀಮಂತರೊಡನೆ ಅವರ ಆಸ್ತಿಯ ಒಂದು ಭಾಗವನ್ನು ಝಕಾತ್ (ಕಡ್ಡಾಯ ದಾನ) ಆಗಿ ಬಡವರಿಗೆ ನೀಡಲು ಆದೇಶಿಸಬೇಕು. ಅವರ ಅತ್ಯುತ್ತಮ ಸಂಪತ್ತನ್ನು ತೆಗೆದುಕೊಳ್ಳಬಾರದೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸಿದರು. ಏಕೆಂದರೆ, ಈ ವಿಷಯದಲ್ಲಿ ಮಧ್ಯಮ ನಿಲುವನ್ನು ಪಾಲಿಸಬೇಕಾಗಿದೆ. ನಂತರ ಅನ್ಯಾಯದಿಂದ ದೂರವಿರಲು ಉಪದೇಶಿಸಿದರು. ಅನ್ಯಾಯಕ್ಕೊಳಗಾದವನು ಅವರ ವಿರುದ್ಧ ಪ್ರಾರ್ಥಿಸದಿರುವುದಕ್ಕಾಗಿ. ಏಕೆಂದರೆ, ಅನ್ಯಾಯಕ್ಕೊಳಗಾದವನ ಪ್ರಾರ್ಥನೆಗೆ ಅಲ್ಲಾಹು ಉತ್ತರ ನೀಡುತ್ತಾನೆ.