ಶದ್ದಾದ್ ಬಿನ್ ಔಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳುತ್ತಾರೆ: ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾನು ಎರಡು ವಿಷಯಗಳನ್ನು ಕಲಿತಿದ್ದೇನೆ: "ನಿಶ್ಚಯವಾಗಿಯೂ ಅಲ್ಲಾಹು ಪ್ರತಿಯೊಂದು ವಿಷಯದಲ್ಲೂ ಉತ್ತಮವಾಗಿ ವರ್ತಿಸುವುದನ್ನು ಕಡ್ಡಾಯಗೊಳಿಸಿದ್ದಾನೆ. ಆದ್ದರಿಂದ ನೀವು (ಪ್ರತೀಕಾರಕ್ಕಾಗಿ) ಕೊಲ್ಲುವಾಗ ಉತ್ತಮ ರೀತಿಯಲ್ಲಿ ಕೊಲ್ಲಿರಿ. ನೀವು (ಪ್ರಾಣಿಗಳನ್ನು ಮಾಂಸಕ್ಕಾಗಿ) ಕೊಯ್ಯುವಾಗ ಉತ್ತಮ ರೀತಿಯಲ್ಲಿ ಕೊಯ್ಯಿರಿ. ನಿಮ್ಮಲ್ಲೊಬ್ಬನು ಕೊಯ್ಯುವಾಗ ಚೂರಿಯನ್ನು ಹರಿತಗೊಳಿಸಲಿ ಮತ್ತು ಪ್ರಾಣಿಗೆ ನಿರಾಳತೆಯನ್ನು ನೀಡಲಿ."
Sahih/Authentic. - Muslim

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಪ್ರತಿಯೊಂದು ವಿಷಯದಲ್ಲೂ ಉತ್ತಮವಾಗಿ ವರ್ತಿಸುವುದನ್ನು ನಮ್ಮ ಮೇಲೆ ಕಡ್ಡಾಯಗೊಳಿಸಿದ್ದಾನೆ. ಉತ್ತಮವಾಗಿ ವರ್ತಿಸುವುದು ಎಂದರೆ, ಆರಾಧನೆ ಮಾಡುವಾಗ, ಜನರಿಗೆ ಒಳಿತು ಮಾಡುವಾಗ ಮತ್ತು ಜನರಿಗೆ ತೊಂದರೆಯಾಗುವುದನ್ನೂ ತಡೆಗಟ್ಟುವಾಗ ಸದಾ ಅಲ್ಲಾಹನ ಬಗ್ಗೆ ಪ್ರಜ್ಞೆಯನ್ನು ಹೊಂದಿರುವುದು. ಈ ಉತ್ತಮ ವರ್ತನೆಯು ಪ್ರಾಣಿಗಳನ್ನು ಕೊಯ್ಯುವಾಗಲೂ ಇರಬೇಕು. ಪ್ರತೀಕಾರಕ್ಕಾಗಿ ಕೊಲ್ಲುವಾಗ, ಹೆಚ್ಚು ನರಳದೆ ಅತ್ಯಂತ ಸುಲಭವಾಗಿ ಮತ್ತು ವೇಗವಾಗಿ ಜೀವ ಹೋಗುವ ವಿಧಾನವನ್ನು ಆರಿಸುವುದು ಉತ್ತಮ ವರ್ತನೆಯಾಗಿದೆ. ಪ್ರಾಣಿಯ ಮೇಲಿರುವ ಸಹಾನುಭೂತಿಯಿಂದ ಚೂರಿಯನ್ನು ಹರಿತಗೊಳಿಸುವುದು, ಪ್ರಾಣಿಗೆ ಕಾಣುವ ರೀತಿಯಲ್ಲಿ ಚೂರಿಯನ್ನು ಹರಿತಗೊಳಿಸದಿರುವುದು ಮತ್ತು ಇತರ ಪ್ರಾಣಿಗಳು ಕಾಣುವ ರೀತಿಯಲ್ಲಿ ಅದನ್ನು ಕೊಯ್ಯದಿರುವುದು ಪ್ರಾಣಿಗಳನ್ನು ಕೊಯ್ಯುವಾಗ ತೋರಬೇಕಾದ ಉತ್ತಮ ವರ್ತನೆಗಳಾಗಿವೆ.

  1. ಸೃಷ್ಟಿಗಳ ಮೇಲೆ ಸರ್ವಶಕ್ತನಾದ ಅಲ್ಲಾಹನಿಗಿರುವ ಕರುಣೆ ಮತ್ತು ಸಹಾನುಭೂತಿಯನ್ನು ಈ ಹದೀಸ್ ವ್ಯಕ್ತಪಡಿಸುತ್ತದೆ.
  2. ಧರ್ಮವು ನಿರ್ದೇಶಿಸಿದ ರೀತಿಯಲ್ಲೇ ಕೊಲ್ಲುವುದು ಅಥವಾ ಕೊಯ್ಯುವುದು ಉತ್ತಮ ವರ್ತನೆಯೆಂದು ಈ ಹದೀಸ್ ತಿಳಿಸುತ್ತದೆ.
  3. ಇಸ್ಲಾಂ ಧರ್ಮದ ಸಂಪೂರ್ಣತೆ ಮತ್ತು ಅದು ಎಲ್ಲಾ ಒಳಿತುಗಳನ್ನು ಒಳಗೊಂಡಿದೆಯೆಂದು ಈ ಹದೀಸ್ ತಿಳಿಸುತ್ತದೆ. ಪ್ರಾಣಿಗಳಿಗೆ ದಯೆ ಮತ್ತು ಸಹಾನುಭೂತಿ ತೋರುವುದು ಇದರಲ್ಲಿ ಒಳಪಡುತ್ತದೆ.
  4. (ಯುದ್ಧದಲ್ಲಿ ಅಥವಾ ಇತರ ನ್ಯಾಯಬದ್ಧ ಸಂದರ್ಭಗಳಲ್ಲಿ) ಮನುಷ್ಯನನ್ನು ಕೊಂದರೆ ಅಂಗಾಂಗಳನ್ನು ವಿರೂಪಗೊಳಿಸುವುದನ್ನು ಈ ಹದೀಸ್ ವಿರೋಧಿಸುತ್ತದೆ.
  5. ಪ್ರಾಣಿಗಳಿಗೆ ನೋವಾಗುವ ರೀತಿಯಲ್ಲಿ ಕೊಯ್ಯುವ ಎಲ್ಲಾ ವಿಧಾನಗಳನ್ನೂ ನಿಷೇಧಿಸಲಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.

ಯಶಸ್ವಿಯಾಗಿ ರವಾನಿಸಲಾಗಿದೆ!