ಕೆಲವು ಕಾರ್ಯಗಳನ್ನು ಮಾಡುವವರು "ಅವರು ನಮ್ಮಲ್ಲಿ ಸೇರಿದವರಲ್ಲ" ಎಂದು ಹೇಳುವ ಮೂಲಕ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಅವು ಹೀಗಿವೆ: ಮೊದಲನೆಯದು: ಶಕುನ ನೋಡುವವನು ಅಥವಾ ಶಕುನ ನೋಡಿಸುವವನು. ಶಕುನ ನೋಡುವುದು ಎಂದರೆ ಪ್ರಯಾಣಕ್ಕೆ ಹೊರಟಾಗ ಅಥವಾ ವ್ಯಾಪಾರ ಮುಂತಾದ ಕೆಲಸಗಳನ್ನು ಪ್ರಾರಂಭಿಸುವಾಗ ಹಕ್ಕಿಯನ್ನು ಹಾರಿಸಿ ಶುಭ ಮತ್ತು ಅಶುಭವನ್ನು ನಿರ್ಧರಿಸುವುದು. ಹಕ್ಕಿ ಬಲಗಡೆಗೆ ಹಾರಿದರೆ ಶುಭ ಸಂಕೇತವೆಂದು ಭಾವಿಸಿ ತಮ್ಮ ಕಾರ್ಯಗಳಲ್ಲಿ ಮುಂದುವರಿಯುವುದು ಮತ್ತು ಹಕ್ಕಿ ಎಡಗಡೆಗೆ ಹಾರಿದರೆ ಅಶುಭ ಸಂಕೇತವೆಂದು ಭಾವಿಸಿ ತಮ್ಮ ಕಾರ್ಯಗಳನ್ನು ಮೊಟಕುಗೊಳಿಸುವುದು. ಈ ರೀತಿ ಸ್ವಯಂ ಶಕುನ ನೋಡುವುದು ಅಥವಾ ಇತರರಿಂದ ನೋಡಿಸುವುದು ನಿಷಿದ್ಧವಾಗಿದೆ. ಹಕ್ಕಿಗಳು, ಪ್ರಾಣಿಗಳು, ಅಂಗವಿಕಲರು, ಸಂಖ್ಯೆಗಳು, ದಿನಗಳು ಮುಂತಾದ ದೃಶ್ಯ ಮತ್ತು ಶ್ರವ್ಯ ವಸ್ತುಗಳ ಮೂಲಕ ಶುಭ ಮತ್ತು ಅಶುಭವನ್ನು ನಿರ್ಧರಿಸುವುದು ವಿರೋಧಿಸಲಾದ ಅಪಶಕುನದಲ್ಲಿ ಒಳಪಡುತ್ತದೆ. ಎರಡನೆಯದು: ಭವಿಷ್ಯ ನೋಡುವುದು ಅಥವಾ ಭವಿಷ್ಯ ನೋಡಿಸುವುದು. ಯಾರು ನಕ್ಷತ್ರ ಮುಂತಾದವುಗಳನ್ನು ಬಳಸಿ ತನಗೆ ಭವಿಷ್ಯವು ತಿಳಿದಿದೆಯೆಂದು ವಾದಿಸುತ್ತಾನೋ, ಅಥವಾ ಜ್ಯೋತಿಷಿ ಮುಂತಾದ ಭವಿಷ್ಯ ನುಡಿಯುತ್ತೇವೆಂದು ವಾದಿಸುವವರ ಬಳಿಗೆ ಹೋಗಿ ಅವರು ಹೇಳುವ ಭವಿಷ್ಯದಲ್ಲಿ ನಂಬಿಕೆಯಿಡುತ್ತಾನೋ ಅವನು ಪ್ರವಾದಿ ಮುಹಮ್ಮದರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವತೀರ್ಣವಾದ ಸಂದೇಶವನ್ನು ನಿಷೇಧಿಸಿದ್ದಾನೆ. ಮೂರನೆಯದು: ಮಾಟ ಮಾಡುವವನು ಅಥವಾ ಮಾಟ ಮಾಡಿಸುವವನು. ಅಂದರೆ, ಇತರರಿಗೆ ಉಪಕಾರ ಅಥವಾ ತೊಂದರೆ ಮಾಡಲು ವಾಮಾಚಾರವನ್ನು ಸ್ವತಃ ಮಾಡುವವನು ಅಥವಾ ಇತರರಿಂದ ಮಾಡಿಸುವವನು; ಅಥವಾ ದಾರಕ್ಕೆ ಗಂಟು ಕಟ್ಟಿ ಅದಕ್ಕೆ ನಿಷೇಧಿಸಲಾದ ಮಂತ್ರಗಳನ್ನು ಊದಿ ವಾಮಾಚಾರ ಮಾಡುವವನು.