ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಂದು ದಿನ ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಕುಳಿತಿದ್ದೆವು. ಆಗ ಶುಭ್ರ ಬಿಳಿ ಬಣ್ಣದ ಬಟ್ಟೆ ಧರಿಸಿದ ಮತ್ತು ಕಡುಗಪ್ಪು ಕೂದಲನ್ನು ಹೊಂದಿದ್ದ ಒಬ್ಬ ವ್ಯಕ್ತಿ ಅಲ್ಲಿಗೆ ಬಂದರು. ಅವರಲ್ಲಿ ಪ್ರಯಾಣದ ಯಾವುದೇ ಕುರುಹು ಗೋಚರಿಸುತ್ತಿರಲಿಲ್ಲ. ನಮ್ಮಲ್ಲಿ ಯಾರಿಗೂ ಅವರ ಪರಿಚಯವಿರಲಿಲ್ಲ. ಎಲ್ಲಿಯವರೆಗೆಂದರೆ ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಬಂದು (ಎರಡು ಕಾಲುಗಳನ್ನು ಮಡಚಿಟ್ಟು), ತಮ್ಮ ಮೊಣಕಾಲನ್ನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೊಣಕಾಲಿಗೆ ತಾಗಿಸಿ ಕುಳಿತರು. ನಂತರ ತಮ್ಮ ಕೈಯನ್ನು ತೊಡೆಯ ಮೇಲಿಟ್ಟು ಹೇಳಿದರು: "ಓ ಮುಹಮ್ಮದ್! ನನಗೆ ಇಸ್ಲಾಮಿನ ಬಗ್ಗೆ ತಿಳಿಸಿಕೊಡಿ." ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಇಸ್ಲಾಮ್ ಎಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಮತ್ತು ಕಅಬಾಲಯಕ್ಕೆ ತಲುಪುವ ಸಾಮರ್ಥ್ಯವಿದ್ದರೆ ಕಅಬಾಲಯಕ್ಕೆ ಹಜ್ಜ್ ನಿರ್ವಹಿಸುವುದು." ಆ ವ್ಯಕ್ತಿ ಹೇಳಿದರು: "ನೀವು ಹೇಳಿದ್ದು ಸತ್ಯ." ಆ ವ್ಯಕ್ತಿ ಪ್ರಶ್ನೆ ಕೇಳಿ ನಂತರ ಅದನ್ನು ಸತ್ಯವೆಂದು ದೃಢೀಕರಿಸುವುದನ್ನು ನೋಡಿ ನಮಗೆ ಅಚ್ಚರಿಯಾಯಿತು! ಅವರು ಹೇಳಿದರು: "ನನಗೆ ಈಮಾನ್‌ನ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಈಮಾನ್ ಎಂದರೆ ಅಲ್ಲಾಹನಲ್ಲಿ, ಅವನ ದೇವದೂತರಲ್ಲಿ, ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರುಗಳಲ್ಲಿ, ಅಂತ್ಯದಿನದಲ್ಲಿ ಮತ್ತು ವಿಧಿಯಲ್ಲಿ — ಅದರ ಒಳಿತು ಮತ್ತು ಕೆಡುಕುಗಳಲ್ಲಿ — ವಿಶ್ವಾಸವಿಡುವುದು." ಆ ವ್ಯಕ್ತಿ ಹೇಳಿದರು: "ನೀವು ಹೇಳಿದ್ದು ಸತ್ಯ." ಆ ವ್ಯಕ್ತಿ ಹೇಳಿದರು: "ನನಗೆ ಇಹ್ಸಾನ್‌ನ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಇಹ್ಸಾನ್ ಎಂದರೆ ನೀವು ಅಲ್ಲಾಹನನ್ನು ನೋಡುತ್ತಿರುವಂತೆ ಅವನನ್ನು ಆರಾಧಿಸುವುದು. ನೀವು ಅವನನ್ನು ನೋಡುವುದಿಲ್ಲವಾದರೂ ಅವನು ನಿಮ್ಮನ್ನು ನೋಡುತ್ತಿದ್ದಾನೆ." ಆ ವ್ಯಕ್ತಿ ಹೇಳಿದರು: "ನನಗೆ ಪ್ರಳಯದ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಪ್ರಳಯದ ಬಗ್ಗೆ ಪ್ರಶ್ನೆ ಕೇಳಲಾದವರಿಗೆ ಪ್ರಶ್ನೆ ಕೇಳಿದವರಿಗಿಂತಲೂ ಹೆಚ್ಚು ಜ್ಞಾನವಿಲ್ಲ." ಆ ವ್ಯಕ್ತಿ ಹೇಳಿದರು: "ಹಾಗಾದರೆ, ನನಗೆ ಅದರ ಚಿಹ್ನೆಗಳ ಬಗ್ಗೆ ತಿಳಿಸಿಕೊಡಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ದಾಸಿ ತನ್ನ ಒಡತಿಗೆ ಜನ್ಮ ನೀಡುವುದು ಮತ್ತು ನಗ್ನ ಪಾದಗಳ ಹಾಗೂ ನಗ್ನ ದೇಹಗಳ ಬಡ ಕುರಿಗಾಹಿಗಳು ಗಗನಚುಂಬಿ ಕಟ್ಟಡಗಳನ್ನು ಕಟ್ಟುವುದರಲ್ಲಿ ಪರಸ್ಪರ ಅಹಂಭಾವಪಡುವುದು ಅದರ ಚಿಹ್ನೆಗಳಾಗಿವೆ." ನಂತರ ಆ ವ್ಯಕ್ತಿ ಹೊರಟುಹೋದರು. ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಸ್ವಲ್ಪ ಹೊತ್ತು ಕುಳಿತುಕೊಂಡೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಓ ಉಮರ್! ಪ್ರಶ್ನೆ ಕೇಳಿದ ವ್ಯಕ್ತಿ ಯಾರೆಂದು ತಮಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ಬಲ್ಲವರು." ಅವರು ಹೇಳಿದರು: "ಅವರು ಜಿಬ್ರೀಲ್. ನಿಮಗೆ ನಿಮ್ಮ ಧರ್ಮವನ್ನು ಕಲಿಸಲು ಅವರು ನಿಮ್ಮ ಬಳಿಗೆ ಬಂದಿದ್ದರು."
Sahih/Authentic. -
Muslim