“ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ಒಳ್ಳೆಯ ಮಾತನ್ನೇ ಆಡಲಿ ಅಥವಾ ಮೌನವಾಗಿರಲಿ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ಒಳ್ಳೆಯ ಮಾತನ್ನೇ ಆಡಲಿ ಅಥವಾ ಮೌನವಾಗಿರಲಿ. ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ತನ್ನ ನೆರೆಮನೆಯವನನ್ನು ಗೌರವಿಸಲಿ. ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ತನ್ನ ಅತಿಥಿಗಳನ್ನು ಗೌರವಿಸಲಿ.”
Sahih/Authentic. - Al-Bukhari and Muslim

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಅಲ್ಲಾಹನಲ್ಲಿ ಮತ್ತು ತಾನು ಅಲ್ಲಾಹನ ಬಳಿಗೆ ಹಿಂದಿರುಗುವ ಮತ್ತು ತನ್ನ ಕರ್ಮಗಳಿಗೆ ಪ್ರತಿಫಲವನ್ನು ಪಡೆಯುವ ಅಂತ್ಯದಿನದಲ್ಲಿ ವಿಶ್ವಾಸವಿಡುವವನಿಗೆ ಅವನ ವಿಶ್ವಾಸವು ಈ ಕೆಳಗಿನ ಕರ್ಮಗಳನ್ನು ಮಾಡುವಂತೆ ಒತ್ತಾಯಿಸುತ್ತದೆ: ಮೊದಲನೆಯದು: ಒಳ್ಳೆಯ ಮಾತುಗಳನ್ನು ಆಡುವುದು. ಉದಾ: ಸುಬ್‌ಹಾನಲ್ಲಾಹ್, ಲಾಇಲಾಹ ಇಲ್ಲಲ್ಲಾಹ್ ಮುಂತಾದ ದಿಕ್ರ್‌ಗಳನ್ನು ಹೇಳುವುದು, ಒಳಿತನ್ನು ಆದೇಶಿಸುವುದು, ಕೆಡುಕನ್ನು ವಿರೋಧಿಸುವುದು, ಜನರಲ್ಲಿ ಸುಧಾರಣೆ ಮಾಡುವುದು ಇತ್ಯಾದಿ. ಯಾರಿಗೆ ಇವುಗಳನ್ನು ಮಾಡಲು ಸಾಧ್ಯವಾಗುವುದಿಲ್ಲವೋ ಅವರು ಮೌನವಾಗಿದ್ದು ಇತರರಿಗೆ ತೊಂದರೆ ಕೊಡದೆ ತಮ್ಮ ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಎರಡನೆಯದು: ನೆರೆಹೊರೆಯವರನ್ನು ಗೌರವಿಸುವುದು. ಅಂದರೆ ಅವರಿಗೆ ಸಹಾಯ ಮಾಡುವುದು ಮತ್ತು ತೊಂದರೆ ಕೊಡದಿರುವುದು. ಮೂರನೆಯದು: ತಮ್ಮನ್ನು ಭೇಟಿ ಮಾಡಲು ಆಗಮಿಸುವ ಅತಿಥಿಗಳನ್ನು ಗೌರವಿಸುವುದು. ಅಂದರೆ ಅವರೊಡನೆ ಉತ್ತಮ ಮಾತುಗಳನ್ನಾಡುವುದು, ಆಹಾರ ನೀಡುವುದು ಇತ್ಯಾದಿ.

  1. ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವುಡು ಎಲ್ಲಾ ಒಳಿತುಗಳ ಮೂಲವಾಗಿದೆ ಮತ್ತು ಅದು ಒಳಿತುಗಳನ್ನು ಮಾಡಲು ಉತ್ತೇಜನ ನೀಡುತ್ತದೆಂದು ಈ ಹದೀಸ್ ತಿಳಿಸುತ್ತದೆ.
  2. ನಾಲಿಗೆಯ ವಿಪತ್ತುಗಳ ಬಗ್ಗೆ ಈ ಹದೀಸಿನಲ್ಲಿ ಎಚ್ಚರಿಸಲಾಗಿದೆ.
  3. ಇಸ್ಲಾಂ ಧರ್ಮವು ಅನ್ಯೋನ್ಯತೆ ಮತ್ತು ಉದಾರತೆಯ ಧರ್ಮವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
  4. ಈ ಲಕ್ಷಣಗಳು ಸತ್ಯವಿಶ್ವಾಸದ ಶಾಖೆಗಳು ಮತ್ತು ಪ್ರಶಂಸನೀಯ ಶಿಷ್ಟಾಚಾರಗಳಲ್ಲಿ ಸೇರಿದ್ದಾಗಿವೆ.
  5. ಹೆಚ್ಚು ಮಾತನಾಡುವುದು ಅಸಹ್ಯಪಡಲಾದ (ಮಕ್ರೂಹ್) ಅಥವಾ ನಿಷೇಧಿಸಲಾದ (ಹರಾಮ್) ಕೃತ್ಯಗಳನ್ನು ಮಾಡಲು ಕಾರಣವಾಗಬಹುದು. ಸತ್ಕರ್ಮಗಳಲ್ಲದ ಇತರ ವಿಷಯಗಳಲ್ಲಿ ಮೌನವಾಗಿರುವುದೇ ಸುರಕ್ಷತೆಯಾಗಿದೆ.

ಯಶಸ್ವಿಯಾಗಿ ರವಾನಿಸಲಾಗಿದೆ!