ನಿಶ್ಚಯವಾಗಿಯೂ ಪುನರುತ್ಥಾನ ದಿನ ಅಲ್ಲಾಹು ಎಲ್ಲಾ ಸೃಷ್ಟಿಗಳ ಮುಂಭಾಗದಲ್ಲಿ ನನ್ನ ಸಮುದಾಯದಲ್ಲಿ ಸೇರಿದ ಒಬ್ಬ ವ್ಯಕ್ತಿಯನ್ನು ಪ್ರತ್ಯೇಕವಾಗಿ ಕರೆಯುವನು...

ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಪುನರುತ್ಥಾನ ದಿನ ಅಲ್ಲಾಹು ಎಲ್ಲಾ ಸೃಷ್ಟಿಗಳ ಮುಂಭಾಗದಲ್ಲಿ ನನ್ನ ಸಮುದಾಯದಲ್ಲಿ ಸೇರಿದ ಒಬ್ಬ ವ್ಯಕ್ತಿಯನ್ನು ಪ್ರತ್ಯೇಕವಾಗಿ ಕರೆಯುವನು. ನಂತರ ಅವನ ಮುಂದೆ ತೊಂಬತ್ತೊಂಬತ್ತು ಸುರುಳಿಗಳನ್ನು ಇಡುವನು. ಪ್ರತಿಯೊಂದು ಸುರುಳಿಯೂ ದೃಷ್ಟಿ ತಲುಪುವಷ್ಟು ದೂರದವರೆಗೆ ಹರಡಿಕೊಂಡಿರುವುದು. ನಂತರ ಅವನು (ಅಲ್ಲಾಹು) ಕೇಳುವನು: "ಇವುಗಳಲ್ಲಿ ಯಾವುದನ್ನಾದರೂ ನೀನು ನಿರಾಕರಿಸುವೆಯಾ? ಕರ್ಮಗಳನ್ನು ದಾಖಲಿಸುವ ನನ್ನ ದೂತರು ನಿನಗೇನಾದರೂ ಅನ್ಯಾಯ ಮಾಡಿದ್ದಾರೆಯೇ?" ಆಗ ಅವನು ಹೇಳುವನು: "ಓ ನನ್ನ ಪರಿಪಾಲಕನೇ! ಖಂಡಿತ ಇಲ್ಲ." ಆಗ ಅಲ್ಲಾಹು ಕೇಳುವನು: "ನಿನಗೆ ಹೇಳಲು ಏನಾದರೂ ನೆಪವಿದೆಯೇ?" ಆಗ ಅವನು ಹೇಳುವನು: "ಓ ನನ್ನ ಪರಿಪಾಲಕನೇ! ಖಂಡಿತ ಇಲ್ಲ." ಆಗ ಅಲ್ಲಾಹು ಕೇಳುವನು: "ನಿಶ್ಚಯವಾಗಿಯೂ ನಮ್ಮ ಬಳಿ ನಿನಗೆ ಒಂದು ಒಳಿತಿದೆ. (ಹೆದರಬೇಡ), ಇಂದು ನಿನಗೆ ಯಾವುದೇ ಅನ್ಯಾಯವಾಗುವುದಿಲ್ಲ." ನಂತರ ಅವನು, "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ನಾನು ಸಾಕ್ಷಿ ವಹಿಸುತ್ತೇನೆ, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷಿ ವಹಿಸುತ್ತೇನೆ" ಎಂದು ಬರೆಯಲಾದ ಒಂದು ಚೀಟಿಯನ್ನು ಹೊರತೆಗೆಯುವನು. ನಂತರ ಅವನು ಹೇಳುವನು: "ನಿನ್ನ ತಕ್ಕಡಿಯನ್ನು ಇಲ್ಲಿಗೆ ತಾ." ಆ ವ್ಯಕ್ತಿ ಕೇಳುವನು: "ಓ ನನ್ನ ಪರಿಪಾಲಕನೇ! ಈ ಸುರುಳಿಗಳಿಗೆ ಹೋಲಿಸಿದರೆ ಈ ಚೀಟಿ ಎಷ್ಟು ತೂಗಬಹುದು?" ಆಗ ಅಲ್ಲಾಹು ಹೇಳುವನು: "(ಹೆದರಬೇಡ), ನಿನಗೆ ಯಾವುದೇ ಅನ್ಯಾಯವಾಗುವುದಿಲ್ಲ." ಆ ಸುರಳಿಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿ ಮತ್ತು ಈ ಚೀಟಿಯನ್ನು ಇನ್ನೊಂದು ತಟ್ಟೆಯಲ್ಲಿ ಇಡಲಾಗುವುದು. ಆಗ ಸುರುಳಿಗಳು ಹಗುರವಾಗಿ ಚೀಟಿ ಭಾರವಾಗುವುದು. ಅಲ್ಲಾಹನ ಹೆಸರಿಗಿಂತಲೂ ಹೆಚ್ಚು ಭಾರವಾದದ್ದು ಯಾವುದೂ ಇಲ್ಲ."
Sahih/Authentic. - At-Tirmidhi

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಪುನರುತ್ಥಾನ ದಿನದಂದು ಅಲ್ಲಾಹು ಸೃಷ್ಟಿಗಳೆಲ್ಲರ ನಡುವಿನಿಂದ ಒಬ್ಬ ವ್ಯಕ್ತಿಯನ್ನು ಆರಿಸಿ ಅವನನ್ನು ವಿಚಾರಣೆಗಾಗಿ ಕರೆಯುವನು. ನಂತರ ಅವನ ಮುಂದೆ ತೊಂಬತ್ತೊಂಬತ್ತು ಸುರುಳಿಗಳನ್ನು ಇಡಲಾಗುವುದು. ಸುರಳಿಗಳು ಎಂದರೆ ಅವನು ಇಹಲೋಕದಲ್ಲಿ ಮಾಡಿದ ದುಷ್ಕೃತ್ಯಗಳನ್ನು ದಾಖಲಿಸಲಾದ ಪುಸ್ತಕಗಳು. ಪ್ರತಿಯೊಂದು ಸುರುಳಿಯು ದೃಷ್ಟಿ ತಲುಪುವಷ್ಟು ಉದ್ದವಾಗಿರುವುದು. ನಂತರ ಸರ್ವಶಕ್ತನಾದ ಅಲ್ಲಾಹು ಆ ವ್ಯಕ್ತಿಯೊಂದಿಗೆ ಕೇಳುವನು: "ಈ ಸುರುಳಿಗಳಲ್ಲಿ ಬರೆದಿರುವ ಏನನ್ನಾದರೂ ನೀನು ನಿರಾಕರಿಸುವೆಯಾ? ಮನುಷ್ಯರ ಕರ್ಮಗಳನ್ನು ದಾಖಲಿಸುವ ನನ್ನ ದೇವದೂತರು ನಿನಗೆ ಅನ್ಯಾಯ ಮಾಡಿದ್ದಾರೆಯೇ?" ಆಗ ಅವನು ಹೇಳುವನು: "ಓ ನನ್ನ ಪರಿಪಾಲಕನೇ! ಖಂಡಿತ ಇಲ್ಲ." ಆಗ ಸರ್ವಶಕ್ತನಾದ ಅಲ್ಲಾಹು ಕೇಳುವನು: "ನೀನು ಇಹಲೋಕದಲ್ಲಿ ಮಾಡಿದ ಈ ದುಷ್ಕರ್ಮಗಳನ್ನು ನೀನು ಮರೆವಿನಿಂದ, ಅಥವಾ ಪ್ರಮಾದದಿಂದ, ಅಥವಾ ಅಜ್ಞಾನದಿಂದ ಮಾಡಿದ್ದೀ ಎಂದು ಸಮರ್ಥಿಸಲು ನಿನ್ನಲ್ಲಿ ಏನಾದರೂ ನೆಪವಿದೆಯೇ?" ಆ ವ್ಯಕ್ತಿ ಹೇಳುವನು: "ಓ ನನ್ನ ಪರಿಪಾಲಕನೇ! ನನ್ನ ಬಳಿ ಯಾವುದೇ ನೆಪಗಳಿಲ್ಲ." ಆಗ ಸರ್ವಶಕ್ತನಾದ ಅಲ್ಲಾಹು ಹೇಳುವನು: "ನಿಶ್ಚಯವಾಗಿಯೂ ನಮ್ಮ ಬಳಿ ನಿನಗೆ ಒಂದು ಒಳಿತಿದೆ. (ಹೆದರಬೇಡ), ಇಂದು ನಿನಗೆ ಯಾವುದೇ ಅನ್ಯಾಯವಾಗುವುದಿಲ್ಲ." ನಂತರ ಅವನು, "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ನಾನು ಸಾಕ್ಷಿ ವಹಿಸುತ್ತೇನೆ, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷಿ ವಹಿಸುತ್ತೇನೆ" ಎಂದು ಬರೆಯಲಾದ ಒಂದು ಚೀಟಿಯನ್ನು ಹೊರತೆಗೆಯುವನು. ನಂತರ ಸರ್ವಶಕ್ತನಾದ ಅಲ್ಲಾಹು ಆ ವ್ಯಕ್ತಿಯೊಡನೆ ಹೇಳುವನು: “ನಿನ್ನ ತಕ್ಕಡಿಯನ್ನು ತಾ.” ಆಗ ಆ ವ್ಯಕ್ತಿ ಅಚ್ಚರಿಯಿಂದ ಕೇಳುವನು: "ಓ ನನ್ನ ಪರಿಪಾಲಕನೇ! ಈ ಸುರುಳಿಗಳಿಗೆ ಹೋಲಿಸಿದರೆ ಈ ಚೀಟಿ ಎಷ್ಟು ತೂಗಬಹುದು?" ಆಗ ಸರ್ವಶಕ್ತನಾದ ಅಲ್ಲಾಹು ಹೇಳುವನು: "ನಿನಗೆ ಯಾವುದೇ ಅನ್ಯಾಯವಾಗುವುದಿಲ್ಲ." ನಂತರ ಆ ಸುರುಳಿಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿ ಮತ್ತು ಈ ಚೀಟಿಯನ್ನು ಇನ್ನೊಂದು ತಟ್ಟೆಯಲ್ಲಿ ಇಡಲಾಗುವುದು. ಆಗ ಸುರುಳಿಗಳಿರುವ ತಟ್ಟೆಯು ಹಗುರವಾಗಿ, ಚೀಟಿಯನ್ನು ಇಡಲಾದ ತಟ್ಟೆ ಭಾರವಾಗುವುದು. ಆಗ ಅಲ್ಲಾಹು ಅವನ ಪಾಪಗಳನ್ನು ಕ್ಷಮಿಸುವನು.

  1. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯನಿಲ್ಲ ಎಂದು ನಾನು ಸಾಕ್ಷಿ ವಹಿಸುತ್ತೇನೆ ಎಂಬ ಏಕದೇವತ್ವ (ತೌಹೀದ್) ವಚನದ ಮಹಿಮೆಯನ್ನು ಮತ್ತು ಅದು ತಕ್ಕಡಿಯಲ್ಲಿ ಭಾರ ತೂಗುವುದನ್ನು ಈ ಹದೀಸ್ ತಿಳಿಸುತ್ತದೆ.
  2. ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯನಿಲ್ಲ) ಎಂದು ನಾಲಿಗೆಯಿಂದ ಉಚ್ಚರಿಸಿದರೆ ಸಾಲದು. ಬದಲಿಗೆ, ಅದರ ಬಗ್ಗೆ ಸರಿಯಾದ ಜ್ಞಾನವನ್ನು ಪಡೆದು ಅದರಂತೆ ನಡೆಯಬೇಕಾದುದು ಅತ್ಯಗತ್ಯವಾಗಿದೆ.
  3. ನಿಷ್ಕಳಂಕತೆ ಮತ್ತು ಏಕದೇವವಿಶ್ವಾಸದ ಶಕ್ತಿಯು ಪಾಪಗಳು ಪರಿಹಾರವಾಗಲು ಕಾರಣವಾಗುತ್ತವೆ.
  4. ಹೃದಯದಲ್ಲಿ ನಿಷ್ಕಳಂಕತೆಯು ಹೆಚ್ಚು-ಕಡಿಮೆಯಾಗುವುದಕ್ಕೆ ಹೊಂದಿಕೊಂಡು ಸತ್ಯವಿಶ್ವಾಸವು ಹೆಚ್ಚು-ಕಡಿಮೆಯಾಗುತ್ತದೆ. ಆದ್ದರಿಂದ ಕೆಲವರು ಈ ವಚನವನ್ನು ಉಚ್ಛರಿಸಿದ್ದರೂ ಸಹ ಅವರು ಮಾಡಿದ ಪಾಪಗಳಿಂದಾಗಿ ಅವರು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ಯಶಸ್ವಿಯಾಗಿ ರವಾನಿಸಲಾಗಿದೆ!