“ನನ್ನಿಂದ ಒಂದೇ ಒಂದು ವಚನವನ್ನಾದರೂ ತಲುಪಿಸಿ. ಬನೂ ಇಸ್ರಾಯೀಲರಿಂದ ಉಲ್ಲೇಖಿಸಿ, ಅದರಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ, ಯಾರು ನನ್ನ ಬಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಹೇಳುತ್ತಾನೋ ಅವನು ನರಕದಲ್ಲಿ ತನ್ನ ಆಸನವನ್ನು ಸಿದ್ಧಪಡಿಸಿಕೊಳ್ಳಲಿ.”...

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನನ್ನಿಂದ ಒಂದೇ ಒಂದು ವಚನವನ್ನಾದರೂ ತಲುಪಿಸಿ. ಬನೂ ಇಸ್ರಾಯೀಲರಿಂದ ಉಲ್ಲೇಖಿಸಿ, ಅದರಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ, ಯಾರು ನನ್ನ ಬಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಹೇಳುತ್ತಾನೋ ಅವನು ನರಕದಲ್ಲಿ ತನ್ನ ಆಸನವನ್ನು ಸಿದ್ಧಪಡಿಸಿಕೊಳ್ಳಲಿ.”
Sahih/Authentic. - Al-Bukhari

ಕುರ್‌ಆನ್ ಮತ್ತು ಸುನ್ನತ್ತಿನಿಂದ ಏನಾದರೂ ಜ್ಞಾನವನ್ನು ತಲುಪಿಸಿಕೊಡಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ಆದೇಶಿಸುತ್ತಿದ್ದಾರೆ. ಅದು ಒಂದೇ ಒಂದು ಸೂಕ್ತಿ ಅಥವಾ ಹದೀಸ್ ಆಗಿದ್ದರೂ ಪರವಾಗಿಲ್ಲ. ಆದರೆ ತಾನು ತಲುಪಿಸುವ ಆ ಸೂಕ್ತಿ ಅಥವಾ ಹದೀಸಿನ ಬಗ್ಗೆ ಸ್ಪಷ್ಟ ಜ್ಞಾನವಿರಬೇಕಾದ ಅಗತ್ಯವಿದೆ. ನಂತರ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬನೂ ಇಸ್ರಾಯೀಲರಿಂದ , ಅವರಿಗೆ ಸಂಭವಿಸಿದ ಕೆಲವು ಘಟನೆಗಳನ್ನು, ಅವು ನಮ್ಮ ಧರ್ಮಸಂಹಿತೆಗೆ (ಶರಿಯತ್) ವಿರುದ್ಧವಾಗಿರದಿದ್ದರೆ ಉಲ್ಲೇಖಿಸುವುದರಲ್ಲಿ ತೊಂದರೆಯಿಲ್ಲವೆಂದು ವಿವರಿಸಿದ್ದಾರೆ. ನಂತರ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಹೆಸರಲ್ಲಿ ಸುಳ್ಳು ಹೇಳುವುದರ ಬಗ್ಗೆ ಎಚ್ಚರಿಸಿದ್ದಾರೆ. ಅವರ ಬಗ್ಗೆ ಯಾರಾದರೂ ಉದ್ದೇಶಪೂರ್ವಕ ಸುಳ್ಳು ಹೇಳಿದರೆ, ಅವನು ನರಕದಲ್ಲಿ ತನ್ನ ಆಸನವನ್ನು, ಅಂದರೆ ಅವನ ವಾಸಸ್ಥಳವನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾನೆ.

  1. ಅಲ್ಲಾಹನ ಧರ್ಮವನ್ನು ಜನರಿಗೆ ತಲುಪಿಸಲು ಈ ಹದೀಸಿನಲ್ಲಿ ಉತ್ತೇಜಿಸಲಾಗಿದೆ. ಪ್ರತಿಯೊಬ್ಬರೂ ತಮಗೆ ಕಂಠಪಾಠವಿರುವ ಮತ್ತು ತಾವು ಸರಿಯಾಗಿ ಅರ್ಥ ಮಾಡಿಕೊಂಡಿರುವ ವಿಷಯಗಳನ್ನು, ಅವು ಎಷ್ಟೇ ಚಿಕ್ಕದಾಗಿದ್ದರೂ ಸರಿ, ಇತರರಿಗೆ ತಲುಪಿಸಲು ಮುತುವರ್ಜಿ ವಹಿಸಬೇಕು.
  2. ಧಾರ್ಮಿಕ ಜ್ಞಾನವನ್ನು ಪಡೆಯುವುದು ಕಡ್ಡಾಯವೆಂದು ಈ ಹದೀಸಿನಲ್ಲಿ ಸೂಚನೆಯಿದೆ. ಇದರಿಂದ ಅಲ್ಲಾಹನನ್ನು ಸರಿಯಾಗಿ ಆರಾಧಿಸಲು ಮತ್ತು ಅವನ ಧರ್ಮವನ್ನು ಸರಿಯಾದ ರೂಪದಲ್ಲಿ ತಲುಪಿಸಲು ಸಾಧ್ಯವಾಗುತ್ತದೆ.
  3. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಉಗ್ರ ಎಚ್ಚರಿಕೆಯಲ್ಲಿ ಒಳಪಡದಿರಲು ಯಾವುದೇ ಹದೀಸನ್ನು ಇತರರಿಗೆ ತಲುಪಿಸುವ ಮುನ್ನ, ಅಥವಾ ಪ್ರಕಟಿಸುವ ಮುನ್ನ ಅದರ ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆ ಮಾಡುವುದು ಕಡ್ಡಾಯವಾಗಿದೆ.
  4. ಮಾತನಾಡುವಾಗ ಸತ್ಯ ಹೇಳಲು ಮತ್ತು ಹದೀಸಿನ ವಿಷಯದಲ್ಲಿ ಎಚ್ಚರಿಕೆ ವಹಿಸಲು ಈ ಹದೀಸಿನಲ್ಲಿ ಒತ್ತಾಯಿಸಲಾಗಿದೆ. ಇದರಿಂದ ಸುಳ್ಳಿನಲ್ಲಿ ಒಳಪಡದಿರಲು ಸಾಧ್ಯವಾಗಬಹುದು. ವಿಶೇಷವಾಗಿ ಅಲ್ಲಾಹನ ಧರ್ಮದ ವಿಷಯದಲ್ಲಿ.

ಯಶಸ್ವಿಯಾಗಿ ರವಾನಿಸಲಾಗಿದೆ!