ಸತ್ಯವಿಶ್ವಾಸವು (ಈಮಾನ್) ಎಪ್ಪತ್ತಕ್ಕಿಂತಲೂ — ಅಥವಾ ಅರುವತ್ತಕ್ಕಿಂತಲೂ — ಹೆಚ್ಚು ಶಾಖೆಗಳನ್ನು ಹೊಂದಿದೆ. 'ಲಾ ಇಲಾಹ ಇಲ್ಲಲ್ಲಾಹ್' ಎಂಬ ವಚನವು ಅತಿಶ್ರೇಷ್ಠ ಶಾಖೆಯಾಗಿದೆ ಮತ್ತು ರಸ್ತೆಯಿಂದ ಅಡ್ಡಿಗಳನ್ನು ನಿವಾರಿಸುವುದು ಅತ್ಯಂತ ಕೆಳಗಿನ ಶಾಖೆಯಾಗಿದೆ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸತ್ಯವಿಶ್ವಾಸವು (ಈಮಾನ್) ಎಪ್ಪತ್ತಕ್ಕಿಂತಲೂ — ಅಥವಾ ಅರುವತ್ತಕ್ಕಿಂತಲೂ — ಹೆಚ್ಚು ಶಾಖೆಗಳನ್ನು ಹೊಂದಿದೆ. 'ಲಾ ಇಲಾಹ ಇಲ್ಲಲ್ಲಾಹ್' ಎಂಬ ವಚನವು ಅತಿಶ್ರೇಷ್ಠ ಶಾಖೆಯಾಗಿದೆ ಮತ್ತು ರಸ್ತೆಯಿಂದ ಅಡ್ಡಿಗಳನ್ನು ನಿವಾರಿಸುವುದು ಅತ್ಯಂತ ಕೆಳಗಿನ ಶಾಖೆಯಾಗಿದೆ. ಸಂಕೋಚವು ಸತ್ಯವಿಶ್ವಾಸದ ಒಂದು ಶಾಖೆಯಾಗಿದೆ."
Sahih/Authentic. - Al-Bukhari and Muslim

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಸತ್ಯವಿಶ್ವಾಸದಲ್ಲಿ (ಈಮಾನ್) ಕರ್ಮಗಳು, ವಿಶ್ವಾಸಗಳು ಮತ್ತು ಮಾತುಗಳು ಸೇರಿದಂತೆ ಅನೇಕ ಶಾಖೆಗಳು ಮತ್ತು ಲಕ್ಷಣಗಳಿವೆ. ಸತ್ಯವಿಶ್ವಾಸದ ಅತ್ಯಂತ ಉನ್ನತ ಮತ್ತು ಶ್ರೇಷ್ಠ ಶಾಖೆಯು 'ಲಾ ಇಲಾಹ ಇಲ್ಲಲ್ಲಾಹ್' ಎಂಬ ವಚನದ ಅರ್ಥವನ್ನು ಸರಿಯಾಗಿ ಅರಿತು ಅದರಂತೆ ಜೀವನ ನಡೆಸುತ್ತಾ ಅದನ್ನು ಉಚ್ಛರಿಸುವುದು. ಅಲ್ಲಾಹು ಏಕೈಕ ಆರಾಧ್ಯನಾಗಿದ್ದಾನೆ; ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯರಿಲ್ಲ ಮತ್ತು ಅವನು ಮಾತ್ರ ಆರಾಧನೆಗೆ ಅರ್ಹನು ಎಂಬುದು ಅದರ ಅರ್ಥ. ರಸ್ತೆಯಲ್ಲಿ ಜನರಿಗೆ ಅಡ್ಡಿಯುಂಟು ಮಾಡುವ ತೊಡಕುಗಳನ್ನು ನಿವಾರಿಸುವುದು ಸತ್ಯವಿಶ್ವಾಸದ ಕರ್ಮಗಳಲ್ಲಿ ಅತ್ಯಂತ ಚಿಕ್ಕದಾಗಿದೆ. ನಂತರ, ಸಂಕೋಚವು ಸತ್ಯವಿಶ್ವಾಸದ ಒಂದು ಲಕ್ಷಣವಾಗಿದೆಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ತಿಳಿಸುತ್ತಾರೆ. ಸಂಕೋಚ ಎಂಬುದು ಒಂದು ಗುಣವಾಗಿದ್ದು ಅದು ಸುಂದರವಾದ ಕರ್ಮಗಳನ್ನು ಮಾಡಲು ಮತ್ತು ಕೆಟ್ಟ ಕರ್ಮಗಳನ್ನು ತ್ಯಜಿಸಲು ಉತ್ತೇಜಿಸುತ್ತದೆ.

  1. ಸತ್ಯವಿಶ್ವಾಸಕ್ಕೆ ಅನೇಕ ಹಂತಗಳಿವೆ ಮತ್ತು ಕೆಲವು ಹಂತಗಳು ಇತರವುಗಳಿಗಿಂತ ಶ್ರೇಷ್ಠವಾಗಿವೆಯೆಂದು ಈ ಹದೀಸ್ ತಿಳಿಸುತ್ತದೆ.
  2. ಸತ್ಯವಿಶ್ವಾಸ (ಈಮಾನ್) ಎಂದರೆ ಮಾತು, ಕ್ರಿಯೆ ಮತ್ತು ವಿಶ್ವಾಸವಾಗಿದೆ.
  3. ಅಲ್ಲಾಹನ ಬಗ್ಗೆ ಸಂಕೋಚ ಪಡುವುದು ಎಂದರೆ, ಅಲ್ಲಾಹು ವಿರೋಧಿಸಿದ ಕಾರ್ಯಗಳಲ್ಲಿ ನೀವು ಇರುವುದನ್ನು ಮತ್ತು ಅವನು ಆದೇಶಿಸಿದ ಕಾರ್ಯಗಳಲ್ಲಿ ನೀವು ಇಲ್ಲದಿರುವುದನ್ನು ಅವನು ನೋಡಬಾರದು ಎಂಬುದಾಗಿದೆ.
  4. ಇಲ್ಲಿ ಸಂಖ್ಯೆಯನ್ನು ಉಲ್ಲೇಖಿಸಿರುವುದು ಸತ್ಯವಿಶ್ವಾಸದ ಕರ್ಮಗಳನ್ನು ಆ ಸಂಖ್ಯೆಗೆ ಸೀಮಿತಗೊಳಿಸುವುದಕ್ಕಲ್ಲ. ಬದಲಾಗಿ, ಸತ್ಯವಿಶ್ವಾಸದಲ್ಲಿ ನೂರಾರು ಕರ್ಮಗಳು ಒಳಗೊಳ್ಳುತ್ತವೆ ಎಂದು ಸೂಚಿಸುವುದಕ್ಕಾಗಿದೆ. ಅರಬ್ಬರು ಕೆಲವೊಮ್ಮೆ ವಿಷಯಗಳನ್ನು ಎಣಿಸಲು ಸಂಖ್ಯೆಯನ್ನು ಬಳಸುತ್ತಾರಾದರೂ ಅವರ ಉದ್ದೇಶವು ಆ ವಿಷಯವನ್ನು ಸಂಖ್ಯೆಗೆ ಸೀಮಿತಗೊಳಿಸುವುದಲ್ಲ.

ಯಶಸ್ವಿಯಾಗಿ ರವಾನಿಸಲಾಗಿದೆ!