ಯಾರು ಜ್ಯೋತಿಷ್ಯ ವಿದ್ಯೆಯನ್ನು ಗಳಿಸುತ್ತಾರೋ ಅವರು ವಾಮಾಚಾರದ ಒಂದು ಶಾಖೆಯನ್ನು ಗಳಿಸುತ್ತಾರೆ. ಅದರ ಬಗ್ಗೆ ಹೆಚ್ಚು ವಿದ್ಯೆಯನ್ನು ಗಳಿಸಿದವರು ಹೆಚ್ಚು ವಾಮಾಚಾರವನ್ನು ಗಳಿಸುತ್ತಾರೆ...

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಜ್ಯೋತಿಷ್ಯ ವಿದ್ಯೆಯನ್ನು ಗಳಿಸುತ್ತಾರೋ ಅವರು ವಾಮಾಚಾರದ ಒಂದು ಶಾಖೆಯನ್ನು ಗಳಿಸುತ್ತಾರೆ. ಅದರ ಬಗ್ಗೆ ಹೆಚ್ಚು ವಿದ್ಯೆಯನ್ನು ಗಳಿಸಿದವರು ಹೆಚ್ಚು ವಾಮಾಚಾರವನ್ನು ಗಳಿಸುತ್ತಾರೆ."
Sahih/Authentic. - Ibn Maajah

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ ನಕ್ಷತ್ರಗಳು, ರಾಶಿಗಳು, ಅವುಗಳ ಚಲನವಲನಗಳು, ಪ್ರವೇಶ ಮತ್ತು ನಿರ್ಗಮನದ ಮೂಲಕ ಭವಿಷ್ಯದಲ್ಲಿ ಸಂಭವಿಸುವ ಜನನ, ಮರಣ, ರೋಗ ಮುಂತಾದ ಸಂಗತಿಗಳಲ್ಲಿ ಅವು ಭೂಮಿಯಲ್ಲಿರುವವರ ಮೇಲೆ ಬೀರುವ ಪರಿಣಾಮಗಳು ಮುಂತಾದವುಗಳನ್ನು ಕಲಿಯುವುದು ಅಥವಾ ಅವುಗಳ ಜ್ಞಾನವನ್ನು ಪಡೆಯುವುದು ವಾಮಾಚಾರದ ಒಂದು ಭಾಗವನ್ನು ಕಲಿಯುವುದಕ್ಕೆ ಸಮವಾಗಿದೆ; ಮತ್ತು ಈ ವಿದ್ಯೆಯನ್ನು ಹೆಚ್ಚು ಹೆಚ್ಚು ಕಲಿತರೆ ಅದು ವಾಮಾಚಾರವನ್ನು ಹೆಚ್ಚು ಹೆಚ್ಚು ಕಲಿಯುವುದಕ್ಕೆ ಸಮವಾಗಿದೆ.

  1. ನಕ್ಷತ್ರಗಳ ಸ್ಥಿತಿಗತಿಗಳನ್ನು ಅವಲಂಬಿಸಿ ಭವಿಷ್ಯ ನುಡಿಯುವ ಜ್ಯೋತಿಷ್ಯವು ನಿಷಿದ್ಧವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದು ತನಗೆ ಅಗೋಚರ ಜ್ಞಾನವಿದೆಯೆಂದು ವಾದಿಸುವುದಾಗಿದೆ.
  2. ನಿಷೇಧಿತ ಜ್ಯೋತಿಷ್ಯವು ತೌಹೀದ್ (ಏಕದೇವತ್ವ)ಗೆ ವಿರುದ್ಧವಾದ ವಾಮಾಚಾರದ ಒಂದು ಅಂಗವಾಗಿದೆ. ಆದರೆ ದಿಕ್ಕುಗಳನ್ನು, ಕಿಬ್ಲವನ್ನು, ಋತುಗಳನ್ನು ಮತ್ತು ತಿಂಗಳುಗಳನ್ನು ತಿಳಿಯಲು ನಕ್ಷತ್ರಗಳನ್ನು ನೋಡುವುದಕ್ಕೆ ಅನುಮತಿಯಿದೆ.
  3. ಜ್ಯೋತಿಷ್ಯದ ಬಗ್ಗೆ ಹೆಚ್ಚು ಹೆಚ್ಚು ಜ್ಞಾನವನ್ನು ಪಡೆಯುವುದು ವಾಮಾಚಾರದ ಒಂದು ಶಾಖೆಯನ್ನು ಹೆಚ್ಚು ಹೆಚ್ಚು ಕಲಿಯುವುದಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
  4. ಅಲ್ಲಾಹು ಪವಿತ್ರ ಕುರ್‌ಆನಿನಲ್ಲಿ ತಿಳಿಸಿದಂತೆ ನಕ್ಷತ್ರಗಳಿಂದ ಮೂರು ಪ್ರಯೋಜನಗಳಿವೆ: ಆಕಾಶಕ್ಕೆ ಅಲಂಕಾರ, ದಿಕ್ಕುಗಳನ್ನು ತಿಳಿಯುವ ಸಂಕೇತ ಮತ್ತು ಪಿಶಾಚಿಗಳಿಗೆ ಎಸೆದು ಓಡಿಸಲಾಗುವ ಸಾಧನ.

ಯಶಸ್ವಿಯಾಗಿ ರವಾನಿಸಲಾಗಿದೆ!