ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಅಲ್ಲಾಹು ಒಳಿತು ಮತ್ತು ಕೆಡುಕುಗಳನ್ನು ನಿರ್ಣಯಿಸಿದ ನಂತರ ಅವುಗಳನ್ನು ದಾಖಲಿಸುವ ವಿಧಾನವನ್ನು ದೇವದೂತರಿಗೆ ಹೀಗೆ ವಿವರಿಸಿಕೊಟ್ಟನು: ಒಬ್ಬ ವ್ಯಕ್ತಿ ಒಂದು ಒಳಿತನ್ನು ಮಾಡಲು ಉದ್ದೇಶಿಸಿ, ಮನಸ್ಸಿನಲ್ಲಿ ದೃಢವಾಗಿ ನಿರ್ಧರಿಸಿದರೆ ಅವನ ಹೆಸರಲ್ಲಿ ಒಂದು ಒಳಿತು ಮಾಡಿದ ಪುಣ್ಯವು ದಾಖಲಾಗುತ್ತದೆ. ಅವನು ಆ ಒಳಿತನ್ನು ಮಾಡದಿದ್ದರೂ ಸಹ. ಇನ್ನು ಅವನು ಅದನ್ನು ಮಾಡಿದರೆ ಅವನ ಹೆಸರಲ್ಲಿ ಹತ್ತರಿಂದ ತೊಡಗಿ ಏಳುನೂರರ ತನಕ ಒಳಿತುಗಳನ್ನು ಮಾಡಿದ ಪುಣ್ಯಗಳು ದಾಖಲಾಗುತ್ತವೆ. ಈ ಹೆಚ್ಚುವರಿಯು ಅವನ ಹೃದಯದಲ್ಲಿರುವ ನಿಷ್ಕಳಂಕತೆ ಮತ್ತು ಆ ಒಳಿತಿನಿಂದ ಇತರ ಜನರಿಗಿರುವ ಪ್ರಯೋಜನಗಳನ್ನು ಅವಲಂಬಿಸಿಕೊಂಡಿದೆ. ಒಬ್ಬ ವ್ಯಕ್ತಿ ಒಂದು ಕೆಡುಕನ್ನು ಮಾಡಲು ಉದ್ದೇಶಿಸಿ, ಮನಸ್ಸಿನಲ್ಲಿ ದೃಢವಾಗಿ ನಿರ್ಧರಿಸಿ, ನಂತರ ಅಲ್ಲಾಹನ ಭಯದಿಂದ ಅದನ್ನು ಮಾಡದಿದ್ದರೆ, ಅವನ ಹೆಸರಲ್ಲಿ ಒಂದು ಒಳಿತು ಮಾಡಿದ ಪುಣ್ಯವು ದಾಖಲಾಗುತ್ತದೆ. ಸಂದರ್ಭಗಳು ಕೈತಪ್ಪಿದ್ದರಿಂದ, ಅಥವಾ ಇತರ ಕಾರ್ಯಗಳಲ್ಲಿ ಮಗ್ನನಾಗಿದ್ದರಿಂದ ಅವನು ಆ ಕೆಡುಕನ್ನು ಮಾಡದಿದ್ದರೆ ಅವನಿಗೆ ಈ ಪುಣ್ಯ ಸಿಗುವುದಿಲ್ಲ. ಆದರೆ, ಅದನ್ನು ಮಾಡಲು ಸಾಧ್ಯವಾಗದೆ ಅವನು ಅದನ್ನು ತೊರೆದರೆ, ಅವನ ಉದ್ದೇಶಕ್ಕೆ ಅನುಗುಣವಾಗಿ ಅವನಿಗೆ ಪ್ರತಿಫಲ ನೀಡಲಾಗುತ್ತದೆ. ಇನ್ನು ಅವನು ಆ ಕೆಡುಕನ್ನು ಮಾಡಿಯೇ ಬಿಟ್ಟರೆ ಅವನ ಹೆಸರಲ್ಲಿ ಕೇವಲ ಒಂದು ಕೆಡುಕು ಮಾತ್ರ ದಾಖಲಾಗುತ್ತದೆ.